ಕಡಬ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು; ಬೈಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಇನ್ನೋವಾ ಕಾರು

(ನ್ಯೂಸ್ ಕಡಬ) newskadaba.com ಕಡಬ, ಆ.26. ಖಾಸಗಿ ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಸಮೀಪದ ನೂಜಿಬಾಳ್ತಿಲ ಎಂಬಲ್ಲಿ ಸೋಮವಾರದಂದು ನಡೆದಿದೆ.

ಮೃತ ಸವಾರನನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದ ಗುತ್ಯಪ್ಪ ಎಂಬವರ ಪುತ್ರ ದೇವರಾಜ್ (22) ಎಂದು ಗುರುತಿಸಲಾಗಿದೆ. ದೇವರಾಜ್ ತನ್ನ ಸ್ನೇಹಿತರೊಂದಿಗೆ ಬೈಕಿನಲ್ಲಿ ಧರ್ಮಸ್ಥಳ ಯಾತ್ರೆ ಮುಗಿಸಿ ಸುಬ್ರಹ್ಮಣ್ಯಕ್ಕೆ‌ ತೆರಳುತ್ತಿದ್ದ ವೇಳೆ ನೂಜಿಬಾಳ್ತಿಲ ಬೆಥನಿ‌ ಕಾಲೇಜಿನ ಮುಂಭಾಗದಲ್ಲಿ ಎದುರಿನಿಂದ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೋವಾ ವಾಹನವನ್ನು ನೋಡಿ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ದೇವರಾಜ್‌ ನನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವರದಿಯಾಗಿದೆ‌. ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಇನ್ನೋವಾ ವಾಹನ ಚರಂಡಿಗೆ ಬಿದ್ದಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ ➤ 4 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಪತ್ತೆ

error: Content is protected !!
Scroll to Top