ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾದ ಬಂಟ್ಸ್ ಹಾಸ್ಟೆಲ್ ರಸ್ತೆ ► ಅಪಾಯಕಾರಿ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ‘ಪಬ್ಲಿಕ್ ಹೀರೋ’ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ನಗರದ ಬಂಟ್ಸ್‌ ಹಾಸ್ಟೆಲ್‌ ವೃತ್ತದ ಬಳಿ ಕಾಂಕ್ರೀಟ್‌ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ಟ್ರಾಫಿಕ್‌ ಪೊಲೀಸ್‌ ರೇವಣ ಸಿದ್ದಪ್ಪರವರಿಗೆ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರದಂದು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಅವರು ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ.

ಅತೀ ಹೆಚ್ಚು ವಾಹನದ ಓಡಾಟದಿಂದಾಗಿ ಬಂಟ್ಸ್‌ ಹಾಸ್ಟೆಲ್‌ ಸರ್ಕಲ್‌ನಿಂದ ಮಲ್ಲಿಕಟ್ಟೆ ಕಡೆಗೆ ತೆರಳುವ ಕಾಂಕ್ರೀಟ್‌ ರಸ್ತೆಯಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಪಟ್ಟಿ ಸವೆದ ಪರಿಣಾಮ ಕಳೆದ ಕೆಲವು ದಿನಗಳ ಹಿಂದೆ ಮೇಲೆ ಬಂದಿತ್ತು. ಇದನ್ನು ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಒಂದುವೇಳೆ ಈ ಕಬ್ಬಿಣದ ಪಟ್ಟಿ ಬೈಕ್‌ ಅಥವಾ ಕಾರುಗಳ ಚಕ್ರಕ್ಕೆ ಸಿಲುಕಿಕೊಂಡರೆ ಅಪಾಯಕರ ಸನ್ನಿವೇಶ ಎದುರಾಗುವ ಸಂಭವವಿತ್ತು. ಇದನ್ನು ಮನಗಂಡ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪನವರು ರಸ್ತೆ ಮಧ್ಯೆ ಕುಳಿತು ಕಬ್ಬಿಣದ ಪಟ್ಟಿ ಮರುಜೋಡಣೆ ಮಾಡುವುದನ್ನು ನೋಡಿದ ಯಾರೋ ಸಾರ್ವಜನಿಕರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದನ್ನು ಗಮನಿಸಿದ ಪೊಲೀಸ್ ಕಮಿಷನರ್ ಟಿ.ಆರ್‌. ಸುರೇಶ್‌ ಅವರು 5 ಸಾವಿರ ರೂ. ನಗದು ನೀಡಿ ಗೌರವಿಸಿದ್ದಾರೆ.

Also Read  ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಕೊರೋನಾ ಸೋಂಕು

error: Content is protected !!
Scroll to Top