(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 26. ಶಾಸಕರ ಹೆಸರಿನಲ್ಲಿ ನಕಲಿ ಸಹಿ ಹಾಗೂ ಲೆಟರ್ ಹೆಡ್ ಸೃಷ್ಟಿ ಮಾಡಿ ಕೆಲಸ ಕೊಡಿಸಿದ ಆರೋಪದ ಮೇರೆಗೆ ಇಬ್ಬರನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ.
ಬಂಧಿತರನ್ನು ರಾಮನಗರದ ಸ್ವಾಮಿ ಹಾಗೂ ಅಂಜನ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಹಿಂದೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ ಸ್ವಾಮಿ, ಇದೀಗ ಕೆಲಸ ತೊರೆದು ರಾಜಕಾರಣಿಗಳ ಒಡನಾಟ ಬೆಳೆಸಿಕೊಂಡಿದ್ದನು. ಆದರೆ ಈತ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ನಕಲಿ ಸಹಿ ಮಾಡಿ, ಬಳಿಕ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದು ಪತ್ನಿ ವಿನುತಾ ಮತ್ತು ಅಂಜನ್ ಎಂಬವರಿಗೆ ಶಾಸಕರ ಆಪ್ತ ಸಹಾಯಕ ಹುದ್ದೆಯನ್ನು ಕೊಡಿಸಿದ್ದನು.
ಪತ್ನಿ ವಿನುತಾಗೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸ್ಸು ಮಾಡಿದ್ದನು. ಈ ನಕಲಿ ಲೆಟರ್ ಹೆಡ್ ನ್ನು ನಂಬಿದ ವಿಧಾನಸಭಾ ಸಚಿವಾಲಯ ಸಿಬ್ಬಂದಿ 2023ರ ಮೇ ತಿಂಗಳಲ್ಲಿ ವಿನುತಾಗೆ ಕೆಲಸ ನೀಡಿದ್ದರು. ಬಳಿಕ, ವಿನುತಾ ಕೆಲಸಕ್ಕೆ ಬಾರದೇ ಪ್ರತಿ ತಿಂಗಳು 30 ಸಾವಿರ ಸಂಬಳವನ್ನು ಪಡೆದಿದ್ದಳು. ಅಲ್ಲದೇ ಗರ್ಭಿಣಿಯಾದ ಬಳಿಕ ಕೆಲಸದಿಂದ ಬಿಡುಗಡೆಗೊಳಿಸುವಂತೆಯೂ ವಿನುತಾ ಪತ್ರ ಬರೆದಿದ್ದಳು. ಇದರ ಬಗ್ಗೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಶಾಸಕ ಎಸ್.ರಘು ಹೆಸರಿನಲ್ಲೂ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಶಾಸಕ ರಘು ಹೆಸರಿನಲ್ಲಿ ನಕಲಿ ಲೆಟರ್ ಸೃಷ್ಟಿಸಿ ಅಂಜನ್ ಕುಮಾರ್ ಎಂಬಾತನಿಗೆ ಕೆಲಸ ಕೊಡಿಸಿದ್ದನು. ಸದ್ಯ ಪೊಲೀಸರು ಸ್ವಾಮಿ ಮತ್ತು ಅಂಜನ್ ಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಸ್ವಾಮಿ ಪತ್ನಿ ವಿನುತಾಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.