(ನ್ಯೂಸ್ ಕಡಬ) newskadaba.com ಥಾಣೆ, ಆ. 26. ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು 70 ವರ್ಷದ ವೃದ್ಧರೊಬ್ಬರನ್ನು ಮೋಸ ಮಾಡಿ, ಅವರ ಬಳಿಯಿದ್ದ 70,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಥಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಚಿನ್ನಾಭರಣ ಕಳೆದುಕೊಂಡವರನ್ನು ದಾಮೋದರ್ ಪಾಟೀಲ್ ಎಂದು ಗುರುತಿಸಲಾಗಿದೆ. ಇವರು ನಾಸಿಕ್- ಮುಂಬೈ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಭದ್ರತಾ ತಪಾಸಣೆಯ ನೆಪದಲ್ಲಿ ಪಾಟೀಲ್ ಅವರ ಕಾರನ್ನು ತಡೆದ ಆರೋಪಿಗಳಿಬ್ಬರು, ಮೊದಲು ಚಿನ್ನಾಭರಣಗಳನ್ನು ತೆಗೆದು ಪೇಪರ್‌ನಲ್ಲಿ ಸುತ್ತಿ ಕಾರಿನ ಡ್ಯಾಶ್ ಬೋರ್ಡ್ ಡ್ರಾಯರ್‌ನಲ್ಲಿ ಇಡುವಂತೆ ಸೂಚಿಸಿ, ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸುತ್ತಾ, ಇಬ್ಬರೂ ಆಭರಣಗಳನ್ನು ಬದಲಾಯಿಸಿ, ಕಲ್ಲುಗಳ ಪೊಟ್ಟಣವನ್ನು ಡ್ಯಾಶ್ ಬೋರ್ಡ್ ನಲ್ಲಿ ಇರಿಸಿದರು ಎನ್ನಲಾಗಿದೆ. ನಂತರ ಅಪರಿಚಿತ ವ್ಯಕ್ತಿಗಳು ಸ್ಥಳದಿಂದ ನಿರ್ಗಮಿಸಿದ್ದು, ಪಾಟೀಲ್ ಅವರು ಪೊಟ್ಟಣ ಪರಿಶೀಲಿಸಿದಾಗ ವಂಚನೆ ಅರಿವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಪಾಟೀಲ್ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತಾ (BNS) ಪ್ರಕಾರ 318(4) (ವಂಚನೆ), 204 (ಸಾರ್ವಜನಿಕ ಸೇವಕನ ಹೆಸರಲ್ಲಿ ಮೋಸ) ಸೆಕ್ಷನ್ ಅಡಿಯಲ್ಲಿ ನಾರ್ಪೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.