ಕೊರಗರ ಕಲ್ಯಾಣ ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ಜಿ.ಪಂ ಸಿಇಓ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಪರಿಶಿಷ್ಟ ಪಂಗಡದ ಸಮುದಾಯಗಳ ಕಲ್ಯಾಣ ಸಮುದಾಯಗಳ ಮೆಗಾ ಇವೆಂಟ್  ಕಾರ್ಯಕ್ರಮವನ್ನು ಸೆಪ್ಟೆಂಬರ್ ಮೊದಲನೇ ವಾರದಲ್ಲಿ  ಆಯೋಜಿಸಬೇಕು. ಮೆಗಾ ಇವೆಂಟ್ ಕಾರ್ಯಕ್ರಮದಲ್ಲಿ  ಕೊರಗ ಸಮುದಾಯಕ್ಕೆ ಉಪಯೋಗವಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ ಹೇಳಿದರು. ಅವರು ಶುಕ್ರವಾರದಂದು ಈ ಸಂಬಂಧ ಜಿಲ್ಲಾ ಮಟ್ಟದಲ್ಲಿ ಅಗತ್ಯ ಪೂರ್ವ ಸಿದ್ಧತೆ ಮತ್ತು ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊರಗ ಸಮುದಾಯದವರಿಗೆ ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ಮಹಾ ಅಭಿಯಾನ ಯೋಜನೆಯಡಿ ಕೇಂದ್ರ ಸರಕಾರದ 09 ಇಲಾಖೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಆಗಸ್ಟ್ 23 ರಿಂದ ಸೆಪ್ಟೆಂಬರ್ 10ವರೆಗೆ ಆಧಾರ್ ನೋಂದಾಣಿ, ಜನ್ ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಜಾತಿ ಪ್ರಮಾಣ ಪತ್ರ, ಸಿಕಲ್ ಸೆಲ್ ಅನೇಮಿಯ, ಸ್ಕ್ರೀನಿಂಗ್, ಪಡಿತರ ಚೀಟಿ, ಪ್ರಧಾನ ಮಂತ್ರಿ ಮಾತೃ ವಂದನಾ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯೋಜನವನ್ನು ಜಿಲ್ಲೆಯ ಕೊರಗ ಸಮುದಾಯದವರು ಪಡೆದುಕೊಳ್ಳಬೇಕು. ಪ್ರಸ್ತುತ ಕೊರಗ ಸಮುದಾಯದವರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಪ್ರತಿಯೊಬ್ಬ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು. ಕೊರಗ ಸಮುದಾಯದ ಏಳಿಗೆಗಾಗಿ ಪ್ರತಿಯೊಬ್ಬ ಅಧಿಕಾರಿ ವರ್ಗದವರು ಶ್ರಮಿಸಬೇಕು ಎಂದರು.

Also Read  ಕೈಕಂಬ: ನದಿ ತಟದಲ್ಲಿ ಬಿದ್ದಿದ್ದ ವೃದ್ಧ ಮಹಿಳೆ ► ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಮುಖ್ಯ ರಸ್ತೆಯಿಂದ 500 ಮೀಟರ್ ದೂರದಲ್ಲಿರುವ ಕೊರಗ ಸಮುದಾಯದವರ ಮನೆಗಳಿಗೆ ವ್ಯವಸ್ಥಿತ ರಸ್ತೆ ನಿರ್ಮಾಣದ ಬಗ್ಗೆ ಮಾಹಿತಿ ಪಡೆದ ಅವರು, ಪ್ರತೀ ತಾಲೂಕಿನಲ್ಲಿರುವ ಕೊರಗರ ಮನೆಗಳಿಗೆ ರಸ್ತೆ ವ್ಯವಸ್ಥೆ ಇದೆಯೇ ಎಂಬ ಬಗ್ಗೆ ಮತ್ತೊಮ್ಮೆ ಸರ್ವೆ ಕಾರ್ಯಗಳನ್ನು ಕೈಗೊಂಡು ಮುಂದಿನ 7 ದಿನಗಳಲ್ಲಿ ಪಟ್ಟಿ ಸಿದ್ದಪಡಿಸಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಸರ್ವೆ ಕಾರ್ಯಗಳನ್ನು ನಡೆಸಿದ ನಂತರವೂ ರಸ್ತೆ ಸಮಸ್ಯೆಗಳ ಬಗ್ಗೆ ದೂರು ಬಂದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಖಾಸಗಿ ರಸ್ತೆಯಲ್ಲಿ ಕೊರಗ ಸಮುದಾಯದವರು ಓಡಾಡುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಪಂಚಾಯತ್‍ನ  ಮುಖಾಂತರ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದರು. ನಲ್ಲಿ ನೀರಿನ ಸಂಪರ್ಕ ಇಲ್ಲದೇ ಇರುವಂತಹ ಮನೆಗಳನ್ನು ಗುರುತಿಸಿ ಹತ್ತಿರದಲ್ಲಿ ಅವರಿಗೆ ಲಭ್ಯವಾಗುವ ನೀರಿನ ಮೂಲಗಳಿಂದ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಕೊರಗ ಸಮುದಾಯದವರ ಆರೋಗ್ಯ ತಪಾಸಣೆಗಾಗಿ ಸಂಚಾರಿ ಆರೋಗ್ಯ ಘಟಕದ ಮೂರು ವಾಹನಗಳು ದುರಸ್ಥಿಯಲ್ಲಿದ್ದು, ಆದಷ್ಟು ಬೇಗ ಸಂಚಾರ ಆರೋಗ್ಯ ಘಟಕ ವಾಹನಗಳನ್ನು ದುರಸ್ತಿಗೊಳಿಸುವಂತೆ ಹಾಗೂ ಹೆಚ್ಚಿನ ವಾಹನಗಳಿಗಾಗಿ ಮನವಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ತಿಳಿಸಿದರು.

ಕೊರಗ ಸಮುದಾಯದವರಿಗಾಗಿ ಹಾಸ್ಟೆಲ್ ಗಳನ್ನು ನಿರ್ಮಿಸಲು ಅನುದಾನವಿದ್ದು ಹಾಸ್ಟೆಲ್ ನಿರ್ಮಾಣಕ್ಕಾಗಿ ಸರಿಯಾದ ಸ್ಥಳಾವಕಾಶವನ್ನು ಗುರುತಿಸಿ ಕೊರಗ ಸಮುದಾಯದವರಿಗೆ ಹಾಗೂ ಇತರೆ ಸಮುದಾಯದವರಿಗೆ ಉಪಯೋಗವಾಗುವಂತೆ ಹಾಸ್ಟೆಲ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತೆ ತಿಳಿಸಿದರು. ಕೊರಗ ಸಮುದಾಯದ ಮಕ್ಕಳು ಈಗಾಗಲೇ ಇತರ ಅಂಗನವಾಡಿ ಕೇಂದ್ರಗಳಿಗೆ ತೆರಳುತ್ತಿದ್ದರೂ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಅಂಗನವಾಡಿಯನ್ನು ನಿರ್ಮಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ ತಿಳಿಸಿದರು.

Also Read  2018-19 ನೇ ಸಾಲಿನ ಘಟಕದ ಒಳಗಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್


ಕೊರಗ ಸಮುದಾಯದವರ ಪ್ರತಿ ಮನೆಗಳಲ್ಲಿ ವಿದ್ಯುತ್ ಮೀಟರ್ ಕನೆಕ್ಷನ್ ಇದೆಯೇ ಎಂಬ ಬಗ್ಗೆ ಸರ್ವೆ ಮೂಲಕ ತಿಳಿದುಕೊಳ್ಳಬೇಕು. ಗುಡ್ಡಗಾಡು ಪ್ರದೇಶದಲ್ಲಿ ಸೋಲಾರ್ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದರು. ಕೊರಗ ಸಮುದಾಯದವರು ವಾಸಿಸುತ್ತಿರುವಂತಹ ಪ್ರದೇಶಗಳಲ್ಲಿ ಮೊಬೈಲ್ ಟವರ್ ಗಳನ್ನು ಶೀಘ್ರದಲ್ಲಿ ಸ್ಥಾಪಿಸುವಂತೆ ಸೂಚಿಸಿದರು. ಸ್ವಂತ ಮನೆ ಹೊಂದಿಲ್ಲದ ಕೊರಗ ಸಮುದಾಯದವರಿಗೆ ಮನೆಗಳನ್ನು ಒದಗಿಸಿಕೊಡಬೇಕು. ದಾಖಲೆಗಳು ಇಲ್ಲದೆ ಇರುವುದರಿಂದ ಸ್ವಂತ ಮನೆ ನಿರ್ಮಾಣಕ್ಕೆ ವಿಳಂಬವಾಗುತ್ತಿರುವ ಬಗ್ಗೆ ಚರ್ಚಿಸಿ ಆಧಾರ್‍ ಕಾರ್ಡ್, ರೇಷನ್‍ ಕಾರ್ಡ್ ಮುಂತಾದ ದಾಖಲೆಗಳು ಲಭ್ಯವಾದ ಕೂಡಲೇ ಮನೆ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕು. ಸ್ವಂತ ಮನೆ ಇಲ್ಲದಿರುವ ಕುಟುಂಬಗಳ ಬಗ್ಗೆ ಸರ್ವೆ ಮಾಡಬೇಕು ಎಂದು ತಿಳಿಸಿದರು.

ಕೊರಗ ಸಮುದಾಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ ಟಾಪ್  ಒದಗಿಸುವ ಯೋಜನೆಯಿದ್ದು ಸ್ನಾತ್ತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅಥವಾ ಡಿಗ್ರಿ ಪದವಿಯಲ್ಲಿ ಪ್ರಸ್ತುತ ವಿದ್ಯಾಭ್ಯಾಸ ಪಡೆಯುತ್ತಿರುವವರನ್ನು ಗುರುತಿಸಿ ಲ್ಯಾಪ್‍ ಟಾಪ್ ಒದಗಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು. ಸಭೆಯಲ್ಲಿ ಪ್ರೊಬೆಶನರಿ ಐಎಎಸ್ ಅಧಿಕಾರಿ ಪಿ. ಶ್ರವಣ್ ಕುಮಾರ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಬಸವರಾಜು ಎಚ್.ಸಿ, ತಾಲೂಕು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top