(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಶುಕ್ರವಾರ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ ಎಸ್. ಸೋಮನಾಥ ಹೇಳಿದ್ದಾರೆ. ಕಳೆದ ವರ್ಷ ಇದೇ ದಿನದಂದು ಉಡಾವಣೆಗೊಂಡ ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸ್ಮರಣಾರ್ಥವಾಗಿ ಆ. 23ನ್ನು ರಾಷ್ಟ್ರೀಯ ಬಾಹ್ಯಾ ಕಾಶ ದಿನವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿತ್ತು.
1969ರಲ್ಲಿ ಸ್ಥಾಪನೆಗೊಂಡ ಇಸ್ರೋ ಸಂಸ್ಥೆಯು 55 ವರ್ಷಗಳಿಂದ ಬಾಹ್ಯಾಕಾಶ ಸಂಶೋಧನೆಯಲ್ಲಿ ಅಗಾಧ ಸಾಧನೆ ಮೆರೆದಿದೆ. ಹಲವು ಉಪಗ್ರಹಗಳ ಮೂಲಕ ಭಾರತದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜತೆಗೆ ಬಾಹ್ಯಾಕಾಶ ಸಾಧನೆಗಳ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಇಸ್ರೋದ ಹಲವಾರು ಸಾಧನೆಗಳ ಪೈಕಿ ಈಗಲೂ ಚಂದ್ರಯಾನ ಸರಣಿ ಮಿಷನ್‌ಗಳು ವಿಶಿಷ್ಟವಾಗಿವೆ. ಕಳೆದ ವರ್ಷ 23ರಂದು ಚಂದ್ರನಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಬಳಿಕ ಈ ಸಾಧನೆ ಮಾಡಿದ ಮೊದಲ ರಾಷ್ಟ್ರ ಎನಿಸಿ ಕೊಂಡಿತು. ಭಾರತದ ಪ್ರಗತಿಯ ಪಯಣದಲ್ಲಿ ಇದೊಂದು ಗಮನಾರ್ಹ ಮೈಲುಗಲ್ಲು. ಈ ಮಹತ್ವದ ದಿನ ಸ್ಮರಣೀಯವಾಗಿಸುವ ಉದ್ದೇಶ ದಿಂದ ಪ್ರತಿವರ್ಷದ ಆ. 23ರ ದಿನವನ್ನು “ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲು ಭಾರತ ಸರಕಾರ ಘೋಷಿಸಿದ್ದು, ಪ್ರಸಕ್ತ ವರ್ಷವೇ ಮೊದಲ ಆಚರಣೆ ಇಂದು ನಡೆಯಲಿದೆ. ಚಂದ್ರಯಾನ-3ಕ್ಕಿಂತ ಮೊದಲು 2019ರ ಜುಲೈ 22ರಂದು ಚಂದ್ರಯಾನ-2ಕ್ಕೆ ಚಾಲನೆ ನೀಡಲಾಗಿತ್ತು. ನಿಗದಿಯಂತೆ ಸೆ. 6ರಂದು ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಬೇಕಿತ್ತು. ಗುರಿ ತಲುಪಲು ಕೇವಲ 2.1 ಕಿ.ಮೀ. ಬಾಕಿ ಇರುವಾಗ ಲ್ಯಾಂಡರ್‌ನ ಅವರೋಹಣ ವೇಗ ಕಡಿಮೆಯಾಗಲಿಲ್ಲ. ಕೊನೇ ಕ್ಷಣದಲ್ಲಾದ ಸಾಫ್ಟ್ ವೇರ್ ದೋಷದಿಂದ ಲ್ಯಾಂಡರ್ ಪತನಗೊಂಡಿತು. 2008ರಲ್ಲಿ ಕೈಗೊಂಡ ಚಂದ್ರಯಾನ 1 ಯಶಸ್ವಿಯಾಗಿತ್ತು. ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡರ್ ಹಾಗೂ ರೋವರ್ ಕಳಿಸುವುದು ಮತ್ತು ಸುರಕ್ಷಿತ ಹಾಗೂ ಸಾಫ್ಟ್ ಲ್ಯಾಂಡಿಂಗ್, ರೋವರ್ ಸಂಚಾರ, ಆ ಮೂಲಕ ಸ್ಥಳದಲ್ಲಿನ ವೈಜ್ಞಾನಿಕ ಪ್ರಯೋಗ, ಸಂಶೋಧನೆ ನಡೆಸುವುದು ಚಂದ್ರಯಾನ-3ರ ಉದ್ದೇಶವಾಗಿತ್ತು. 2023 ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಹೊತ್ತ ರಾಕೆಟ್ ಉಡಾವಣೆಗೊಂಡಿತು.
ಸದ್ಯ, ಚಂದ್ರಯಾನ 4-5 ವಿನ್ಯಾಸ ಪೂರ್ಣಗೊಂಡಿದ್ದು, ಅದಕ್ಕಾಗಿ ಸರ್ಕಾರದ ಅನುಮೋದನೆಯನ್ನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರಯಾನ-4 ಮಿಷನ್ ಕೂಡಾ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುವ ಗುರಿ ಹೊಂದಿದೆ. ಜತೆಗೆ ಚಂದ್ರನ ಕಲ್ಲುಗಳು ಮತ್ತು ಮಣ್ಣನ್ನು ಭೂಮಿಗೆ ಮರಳಿ ತರುವುದು ಇದರ ಉದ್ದೇಶವಾಗಿದೆ. ಚಂದ್ರನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವುದು, ಚಂದ್ರನ ಕಕ್ಷೆಯಲ್ಲಿ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು ನಡೆಸುವುದು ಇನ್ನಿತರ ಪ್ರಯೋಗಗಳನ್ನು ಚಂದ್ರಯಾನ ಯೋಜನೆ ಒಳಗೊಂಡಿದೆ ಎಂದು ಸೋಮನಾಥ ಮಾಹಿತಿ ನೀಡಿದ್ದಾರೆ.