ಮಂಗಳೂರು ಕಾರಾಗೃಹದಲ್ಲಿ ಸಸಿ ಮಾರಾಟ ಕೇಂದ್ರ ಉದ್ಘಾಟನೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 21. ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಬೆಳೆಸಿದ ಸಸಿಗಳ ಮಾರಾಟ ಕೇಂದ್ರವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಉದ್ಘಾಟಿಸಿದರು.

ಕೆಲವು ತಿಂಗಳ ಹಿಂದೆ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು, ಕೈದಿಗಳು ಬೆಳೆಸಿದ್ದ ವಿವಿಧ ಸಸಿಗಳ ಸಸ್ಯ ಕ್ಷೇತ್ರವನ್ನು ಕಂಡು ಸಂತಸಗೊಂಡಿದ್ದರು. ಇವುಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರಾಗೃಹದ ಮುಂಭಾಗದ ಜಾಗದಲ್ಲಿ ಸಸಿ ಮಾರಾಟ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಸಿ ಮಾರಾಟ ಕೇಂದ್ರದ ಉದ್ಘಾಟಿಸಿದ ಜಿಲ್ಲಾಧಿಕಾರಿಗಳು ಮಾತನಾಡಿ, ಕಳೆದ ಬಾರಿ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಸಸ್ಯಕ್ಷೇತ್ರವನ್ನು ನೋಡಿದಾಗ ಯಾವುದೇ ನರ್ಸರಿಗೆ ಕಡಿಮೆ ಇಲ್ಲದಂತೆ ಬೆಳೆಸಲಾಗಿತ್ತು. ಕೈದಿಗಳು ಬಹಳ ಉತ್ತಮವಾಗಿ ಸಸಿಗಳನ್ನು ಬೆಳೆಸಿದ್ದರು. ಈ ನಿಟ್ಟಿನಲ್ಲಿ ಮಾರಾಟ ಕೇಂದ್ರ ಸ್ಥಾಪಿಸುವ ಮೂಲಕ ಇನ್ನಷ್ಟು ಉತ್ತೇಜನ ನೀಡಲಾಗಿದೆ ಎಂದು ಹೇಳಿದರು. ಕೈದಿಗಳ ಪರಿವರ್ತನೆ ಮತ್ತು ಸ್ವಾವಲಂಬಿ ಬದುಕಿಗಾಗಿ ಕಾರಾಗೃಹ ಇಲಾಖೆಯು, ಮಹಾನಗರಪಾಲಿಕೆ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾಡಿರುವ ಈ ವಿನೂತನ ಯೋಜನೆ ಶ್ಲಾಘನೀಯ ಎಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಟಿ. ಓಬಳೇಶಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group