ಸೆ. 01ರಂದು CET, NEET ಸೀಟು ಹಂಚಿಕೆ ಫಲಿತಾಂಶ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 21. ಪಿಯುಸಿ ನಂತರದ ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಆಯ್ಕೆಗಳನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಂಗಳವಾರದಂದು ತನ್ನ ವೆಬ್ ಸೈಟ್ ನಲ್ಲಿ ಪೋರ್ಟಲ್ ತೆರೆದಿದ್ದು, ಆಗಸ್ಟ್ 22ರ ಬೆಳಗ್ಗೆ 10 ಗಂಟೆಯವರೆಗೆ ಅಭ್ಯರ್ಥಿಗಳು ತಮಗೆ ಇಚ್ಛೆ ಇರುವ ಕಾಲೇಜು ಮತ್ತು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸಂಬಂಧ ಇದೇ ಮೊದಲ ಬಾರಿಗೆ‌ ಅಭ್ಯರ್ಥಿಗಳ ನೋಂದಾಯಿತ ಮೊಬೈಲ್‌ಗೆ ವಾಟ್ಸಪ್‌ ಸಂದೇಶ ಕೂಡ ರವಾನಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ಹಾಗೂ ಇತರೆ ಕೋರ್ಸುಗಳಿಗೂ ಆಪ್ಷನ್ (ಆಯ್ಕೆ)ಗಳನ್ನು ದಾಖಲಿಸಲು ಅವಕಾಶ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.

 

ಆಗಸ್ಟ್ 25ರ ರಾತ್ರಿ 8ಕ್ಕೆ ಎರಡನೇ ಅಣಕು ಸೀಟು ಹಂಚಿಕೆಯ ಫಲಿತಾಂಶ (ಯುಜಿ ಸಿಇಟಿ/ನೀಟ್) ಪ್ರಕಟಿಸಲಾಗುತ್ತದೆ. ನಂತರ ಆಗಸ್ಟ್ 27ರ ಬೆಳಗ್ಗೆ 11ರ ವರೆಗೆ ಇಚ್ಛೆಗಳನ್ನು ಬದಲಿಸಿಕೊಳ್ಳಬಹುದು. ಸೆಪ್ಟೆಂಬರ್ 1ರಂದು ಸಂಜೆ 6ಕ್ಕೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದರು. ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ/ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಹಾಗೆಯೇ ಕಾಲೇಜು  ಶುಲ್ಕದ ಮಾಹಿತಿ ಕೂಡ ಇದ್ದು, ಅದನ್ನೂ ಗಮನಿಸಿಯೇ‌ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ.

error: Content is protected !!

Join the Group

Join WhatsApp Group