ಉದ್ಯಮಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಮೃತದೇಹವನ್ನು ಶಿರಾಡಿ ಘಾಟ್ ನಲ್ಲಿ ಎಸೆದ ಹಂತಕರು



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.23. ಸೋಮವಾರಪೇಟೆಯ ಉದ್ಯಮಿಯೋರ್ವರನ್ನು ತನ್ನ ನೌಕರರಿಬ್ಬರು ಉಪ್ಪಿನಂಗಡಿ ಸಮೀಪದ ಬುಡೋಳಿ ಎಂಬಲ್ಲಿ ಉಸಿರುಗಟ್ಟಿಸಿ ಕೊಲೆಗೈದು ಮೃತದೇಹವನ್ನು ಶಿರಾಡಿ ಘಾಟ್ ನಲ್ಲಿ ಎಸೆದ ಅಮಾನವೀಯ ಘಟನೆ ಬುಧವಾರದಂದು ನಡೆದಿದ್ದು, ಗುರುವಾರದಂದು ಬೆಳಕಿಗೆ ಬಂದಿದೆ.







ಮೃತರನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಉದ್ಯಮಿ ಮಹೇಶ್ ಎಂದು ಗುರುತಿಸಲಾಗಿದೆ. ಇವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ರಘ ಎಂಬವರು ಉಪ್ಪಿನಂಗಡಿಗೆ ಕರೆತಂದು ಬುಡೋಳಿ ಸಮೀಪದಲ್ಲಿ ಕೊಲೆಗೈದ ನಂತರ ಶಿರಾಡಿಯ ಕೆಂಪುಹೊಳೆ ಸಮೀಪ ಮೃತದೇಹವನ್ನು ಎಸೆದು ನೇರವಾಗಿ ವಕೀಲರ ಮೂಲಕ ಸೋಮವಾರಪೇಟೆ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ಭಿನ್ನಾಭಿಪ್ರಾಯಗಳಿದ್ದ ಕಾರಣ ಕೊಲೆಗೈಯಲಾಗಿದೆಯೆಂದು ಹೇಳಲಾಗುತ್ತಿದ್ದರೂ, ಯಾವುದೋ ಮಹಿಳೆಯ ಅನೈತಿಕ ಸಂಬಂಧದ ವಿಚಾರವಾಗಿ ಕೊಲೆಗೈಯಲಾಗಿದೆ ಎಂದೂ ಕೇಳಿಬರುತ್ತಿದೆ. ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಶಿರಾಡಿ ಘಾಟ್ ನಲ್ಲಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಘಟನೆಯ ಬಗೆಗಿನ ನಿಖರ ಮಾಹಿತಿಗಳು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.






error: Content is protected !!
Scroll to Top