ವೈದ್ಯರ ರಕ್ಷಣಾ ಮಸೂದೆಗೆ ರಾಜ್ಯಪಾಲರ ಅಂಕಿತ – ವೈದ್ಯರ ಮೇಲೆ ಹಲ್ಲೆ ಮಾಡಿದರೆ 7 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 20.‌ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಳಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ- 2024ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಕಾಯ್ದೆ ಜಾರಿ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

 

ಮಳೆಗಾಲದ ಅಧಿವೇಶನದಲ್ಲಿ ಜುಲೈ 25ರಂದು ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ – 2024ಕ್ಕೆ ವಿಧಾನ ಪರಿಷತ್‍ನಲ್ಲಿ ಅಂಗೀಕಾರ ಸಿಕ್ಕಿತ್ತು. ಇದೀಗ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಕಾಯ್ದೆ ಪ್ರಕಾರ ಉದ್ದೇಶ ಪೂರ್ವಕವಾಗಿ ವೈದರ ಮೇಲೆ ಹಲ್ಲೆ, ನಿಂದನೆ ಅವಮಾನಿಸುವುದನ್ನು ನಿಷೇಧಿಸಲಾಗಿದೆ. ವೈದ್ಯರ ಮೇಲಿನ ಹಲ್ಲೆಗೆ 3 ವರ್ಷದಿಂದ 7 ವರ್ಷದ ತನಕ ಜೈಲು ಶಿಕ್ಷೆ ಹಾಗೂ 25 ಸಾವಿರದಿಂದ 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ಇನ್ನು ನಕಲಿ ವೈದ್ಯರ ಮೇಲಿನ ದಂಡ 10 ಸಾವಿರದಿಂದ 1 ಲಕ್ಷದವರೆಗೆ ಏರಿಕೆ ಮಾಡಲಾಗಿದೆ.

Also Read  ವಿಧಾನಸಭೆಯ ಸ್ಪೀಕರ್ ಆಗಿ ಯುಟಿ ಖಾದರ್ ಅವಿರೋಧವಾಗಿ ಆಯ್ಕೆ

 

ವೈದ್ಯಕೀಯ ಪರಿಷತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಹೊರತುಪಡಿಸಿ ಇತರೆ ಸದಸ್ಯರು, ನಾಮನಿರ್ದೇಶಿತರ ಅವಧಿಯನ್ನು 5 ವರ್ಷಕ್ಕೆ ನಿಗದಿಪಡಿಸಲಾಗಿದೆ. ಎರಡು ಅವಧಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷರಾಗಿದ್ದವರು ಮತ್ತೆ ಅದೇ ಸ್ಥಾನಕ್ಕೆ ಚುನಾಯಿತರಾಗಲು ಅವಕಾಶವಿರುವುದಿಲ್ಲ. ಪರಿಷತ್‍ಗೆ 3 ವರ್ಷಗಳ ಅವಧಿಗೆ ಒಬ್ಬ ರಿಜಿಸ್ಟ್ರಾರ್ ಮತ್ತು ಉಪರಿಜಿಸ್ಟ್ರಾರ್ ನೇಮಕ ಮಾಡಲಾಗುತ್ತದೆ.

ಕಾಯ್ದೆ ಪ್ರಕಾರ ವೈದ್ಯರು ವೃತ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ, ವೈದ್ಯಕೀಯ ಪರಿಷತ್ತಿನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಒಂದು ವೇಳೆ ನೋಂದಣಿಯಾಗದೇ ವೃತ್ತಿ ಅಭ್ಯಾಸ ಮಾಡುತ್ತಿದ್ದರೆ, ಅಂತಹವರ ವಿರುದ್ಧ ಪರಿಷತ್ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪರಿಷತ್ತಿನಲ್ಲಿ ನೋಂದಣಿಯಾಗದವರು ವೈದ್ಯ ವೃತ್ತಿ ನಿರ್ವಹಿಸುವಂತಿಲ್ಲ. ನಕಲಿ ವೈದ್ಯರ ವಿರುದ್ಧ ಪರಿಷತ್ ಸ್ವಯಂ ಪ್ರೇರಣೆಯಿಂದ ದೂರು ಸಲ್ಲಿಸಬಹುದಾಗಿದೆ.

ವೈದ್ಯಕೀಯ ಪರಿಷತ್ತಿಗೆ ರಿಜಿಸ್ಟರ್ ಹಾಗೂ ಉಪರಿಜಿಸ್ಟರ್ ಗಳನ್ನು ನೇಮಕ ಮಾಡುವ ವ್ಯವಸ್ಥೆಯಲ್ಲೂ ಬದಲಾವಣೆಯನ್ನು ತರಲಾಗಿದೆ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು, ಒಂದು ವೇಳೆ ಇಬ್ಬರು ಲಭ್ಯವಿಲ್ಲದ ಸಂದರ್ಭದಲ್ಲಿ ಸದಸ್ಯರು ಸಭೆಯ ಅಧ್ಯಕ್ಷತೆ ವಹಿಸಬಹುದು ಎಂದು ತಿಳಿಸಲಾಗಿದೆ. ಪರಿಷತ್ತಿನ ರಿಜಿಸ್ಟ್ರಾರ್ ಅವರು ವೈದ್ಯಕೀಯ ವೃತ್ತಿಗರ ಪಟ್ಟಿಯನ್ನು ಪ್ರತಿದಿನ ಅಧಿಕೃತ ಜಾಲತಾಣದಲ್ಲಿ ನಿರ್ವಹಿಸಬೇಕು ಮತ್ತು ರಾಷ್ಟ್ರೀಯ ಆಯೋಗಕ್ಕೆ ತಿಳಿಸಬೇಕು ಎಂದು ಸೂಚಿಸಲಾಗಿದೆ.

Also Read  ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ➤ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಇನ್ನು ಮುಂದೆ ವೈದ್ಯಕೀಯ ಸೇವಾ ಸಿಬ್ಬಂದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ, ಆಡಿಯೊ- ವಿಡಿಯೋಗಳಲ್ಲಿ, ಆಸ್ಪತ್ರೆಗಳಲ್ಲಾಗಲಿ ಫೋಟೊ, ವಿಡಿಯೋ ತೆಗೆಯುವ ಮೂಲಕ ಅಗೌರವಿಸುವ, ದೌರ್ಜನ್ಯ ಎಸಗುವ ಕೃತ್ಯಗಳನ್ನು ನಡೆಸಿದರೆ ಅಂತಹ ಕೃತ್ಯಗಳೂ ದಂಡನಾರ್ಹವಾಗಲಿವೆ ಎಂದು ಹೇಳಿದೆ..

error: Content is protected !!
Scroll to Top