ಕಡಬದಲ್ಲಿ ಮಿತಿ ಮೀರಿದ ವಿದ್ಯುತ್ ಸಮಸ್ಯೆ ► ಬಳಕೆದಾರರಿಂದ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ.22. ಪರಿಸರದಲ್ಲಿ ಕಳೆದ ಕೆಲ ಸಮಯದಿಂದ ವಿದ್ಯುತ್ ಸಮಸ್ಯೆ ಮಿತಿ ಮೀರಿದ್ದು, ಪದೇ ಪದೇ ಕೈಕೊಡುವ ವಿದ್ಯುತ್ ಹಾಗೂ ಲೋ ವೋಲ್ಟೇಜ್ ಸಮಸ್ಯೆಯಿಂದ ಬೇಸತ್ತಿರುವ ವಿದ್ಯುತ್ ಬಳಕೆದಾರರು ಕಡಬ ಮೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ವಿದ್ಯುತ್ ಕಡಿತ ಹಾಗೂ ಲೋ ವೋಲ್ಟೇಜ್ ಸಮಸ್ಯೆಯಿಂದ ಕೃಷಿಕರು, ವಿದ್ಯಾರ್ಥಿಗಳು, ಉದ್ದಿಮೆದಾರರು ಸೇರಿದಂತೆ ವಿದ್ಯುತ್ ಬಳಕೆದಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಪ್ರತಿ ಬಾರಿ ವಿದ್ಯುತ್ ಸಮಸ್ಯೆಯ ಕುರಿತು ವಿಚಾರಿಸಿದರೂ ಮೆಸ್ಕಾಂ ಅಧಿಕಾರಿಗಳಿಂದ ಸೂಕ್ತ ಉತ್ತರ ಸಿಗುವುದಿಲ್ಲ. ಕಳೆದ ತಿಂಗಳು ಕಡಬದಲ್ಲಿ ಜರಗಿದ ವಿದ್ಯುತ್ ಬಳಕೆದಾರರ ಸಭೆಯಲ್ಲಿಯೂ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮೆಸ್ಕಾಂನ ಉನ್ನತ ಅಧಿಕಾರಿಗಳ ಮುಂದಿಟ್ಟಿದ್ದರು. ಅಧಿಕಾರಿಗಳು ಶೀಘ್ರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರೂ ಸಮಸ್ಯೆ ಇನ್ನಷ್ಟು ಬಿಗಡಾಯಿಸಿರುವುದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ. ಪದೇ ಪದೇ ವಿದ್ಯುತ್ ಕೈಕೊಡುವುದರಿಂದಾಗಿ ಯಾವುದೇ ಉದ್ದಿಮೆಗಳು ನಡೆಯುವುದಿಲ್ಲ. ಲೋ ವೋಲ್ಟೇಜ್ನಿಂದಾಗಿ ಇನ್ವರ್ಟರ್ ಗಳು ಕೂಡ ಚಾರ್ಜ್ ಆಗದೇ ತೀವ್ರ ಸಮಸ್ಯೆ ಎದುರಾಗಿದೆ. ಕೃಷಿಕರು ಕೂಡ ತಮ್ಮ ನೀರಾವರಿ ಪಂಪ್ ಗಳನ್ನು ಚಾಲೂ ಮಾಡಲು ಸಾಧ್ಯವಾಗದೆ ಕಂಗೆಟ್ಟಿದ್ದಾರೆ. ಕೃಷಿ ತೋಟಗಳು ನೀರಿಲ್ಲದೇ ಕೆಂಬಣ್ಣಕ್ಕೆ ತಿರುಗಿವೆ. ಆದುದರಿಂದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಕಡಬ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸುತ್ತಿರುವುದಾಗಿ ವಿದ್ಯುತ್ ಬಳಕೆದಾರರು ತಿಳಿಸಿದ್ದಾರೆ.

Also Read  ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಕಾರ ಮಳೆ

ವಿದ್ಯುತ್ ಸಮಸ್ಯೆಯಿಂದಾಗಿ ಕಡಬ ಪೇಟೆಯ ವಿವಿಧ ಉದ್ದಿಮೆಗಳು ಸೇರಿದಂತೆ ವರ್ತಕರು ಕೂಡ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ  ಕಡಬದ ವರ್ತಕ ಸಂಘದ ಪದಾಧಿಕಾರಿಗಳು ಕಡಬ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಕೂಡಲೇ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಕಡಬ ಸಿಟಿ ಫೀಡರ್ ವ್ಯಾಪ್ತಿಯಲ್ಲಿಯೂ ಸಮರ್ಪಕ ವಿದ್ಯುತ್ ನೀಡದಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ವರ್ತಕರು ಕೂಡಲೇ ಸಿಟಿ ಫೀಡರ್ ವ್ಯಾಪ್ತಿಗೆ ಪವರ್ ಕಟ್ ರಹಿತ  ಗುಣಮಟ್ಟದ ವಿದ್ಯುತ್ ನೀಡುವಂತೆ ಮನವಿ ಮಾಡಿದರು. ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್., ಪದಾಧಿಕಾರಿಗಳಾದ ಜೋಸ್ ಕೆ.ಜೆ., ನಾಗೇಶ್ ಕಾಮತ್, ಮಹಮ್ಮದ್ ರಫೀಕ್, ಇಸ್ಮಾಯಿಲ್ ಕೆಮ್ಮಾರ, ಸಂತೋಷ್ ಕುಮಾರ್ ಕೋಡಿಬೈಲು, ಶೀನಪ್ಪ ಡಿ., ಶಶಿಧರನ್, ಅಬ್ದುಲ್ ರಝಾಕ್ ಹೇಂತಾರ್ ಮುಂತಾದವರು  ನಿಯೋಗದಲ್ಲಿದ್ದರು. ವರ್ತಕರೊಂದಿಗೆ ಮಾತುಕತೆ ನಡೆಸಿದ ಕಡಬ ಮೆಸ್ಕಾಂ ಉಪ ವಿಭಾಗದ ಸಹಾಯಕ ಇಂಜಿನಿಯರ್ (ತಾಂತ್ರಿಕ) ಸಜಿಕುಮಾರ್ ಅವರು ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ಲೋಡ್ ಇರುವುದರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಸಲು ತೊಂದರೆಯಾಗುತ್ತಿದೆ. ಪವರ್ ಟ್ರಾನ್ಸ್ಫಾರ್ಮರ್ ಮೇಲ್ದರ್ಜೆಗೇರಿಸಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.

Also Read  ನೇತ್ರಾವತಿ ನದಿಗೆ ಬಿದ್ದು ಯುವಕ ಗಂಭೀರ ➤ ಆಸ್ಪತ್ರೆಗೆ ದಾಖಲು

error: Content is protected !!
Scroll to Top