ಪ್ರಾಕೃತಿಕ ವಿಕೋಪ- ಕಂದಾಯ ಸಚಿವರಿಂದ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 19. ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಿಶೀಲಿಸಲು  ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ  ಅಧ್ಯಕ್ಷತೆಯಲ್ಲಿ  ವಿಡಿಯೋ ಕಾನ್ಫೆರೆನ್ಸ್  ಸಭೆಯ ನಡೆಯಿತು.  ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಈಗಾಗಲೇ   ಭಾರಿ ಮಳೆಯಿಂದ  ಹಲವಾರು ಹಾನಿಗಳು  ಉಂಟಾಗಿದ್ದು ಜಿಲ್ಲಾ ಮಟ್ಟದಲ್ಲಿ  ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದರು.  ಗ್ರಾಮ ಪಂಚಾಯತ್ ಮಟ್ಟದಲ್ಲಿ  ಟಾಸ್ಕ್ ಫೋರ್ಸ್ ಕಮಿಟಿಯನ್ನು ಸ್ಥಾಪಿಸಬೇಕು. ಶಿಥಿಲ ಅವಸ್ಥೆಯಲ್ಲಿರುವಂತಹ ಶಾಲೆಗಳು ಅಂಗನವಾಡಿಗಳನ್ನು ಗುರುತಿಸಿ ಕೂಡಲೇ ಸ್ಥಳಾಂತರಿಸಬೇಕು ಹಾಗೂ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಕಾಲುಸಂಕ, ಸೇತುವೆಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು  ಎಂದರು.

ಈಗಾಗಲೇ ರಾಜ್ಯದಲ್ಲಿ ನೀರಿನಿಂದ ಕೊಚ್ಚಿ ಹೋಗಿ  ಸಾವು ನೋವು ಉಂಟಾದ ಘಟನೆಗಳು ಹಲವಾರು ನಡೆದಿದ್ದು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು.  ಯಾವುದೇ  ರೀತಿಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸದೆ  ಸಾವು ನೋವುಗಳು ಉಂಟಾದರೆ  ಅವುಗಳ ಜವಾಬ್ದಾರಿ ವಹಿಸಿರುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಕೂಳೂರು ಸೇತುವೆ ಹಾಗೂ  ಕೆತ್ತಿಕಲ್ಲು ಗುಡ್ಡದ  ಗುಡ್ಡದಿಂದ ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಅಪಾಯದ ಬಗ್ಗೆ  ಸಚಿವರಿಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವಂತೆ  ಹಾಗೂ ಉನ್ನತ ಮಟ್ಟದ ತಾಂತ್ರಿಕತೆ ಬಳಸಿಕೊಂಡು  ಕ್ರಮ ಕೈಗೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ  ಪೊಲೀಸ್ ಅಧೀಕ್ಷಕ ಯತೀಶ್, ಅಪರ ಜಿಲ್ಲಾಧಿಕಾರಿ  ಡಾ. ಜಿ ಸಂತೋಷ್ ಕುಮಾರ್, ಪುತ್ತೂರು ಉಪ ವಿಭಾಗಾಧಿಕಾರಿ  ಜುಬಿನ್ ಮಹಾಪಾತ್ರ, ಮಂಗಳೂರು ಎಸಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top