ಮರ ಉಳಿಸಿ, ಬೆಳೆಸಿ, ಪೋಷಿಸಿ- ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 19. ಭಾರಿ ಗಾಳಿ ಮಳೆಗೆ ಧಾರಾಶಾಹಿಯಾದ ಮರವನ್ನು ಮತ್ತೆ ಅದೇ ಸ್ಥಾನದಲ್ಲಿ ಮರುಸ್ಥಾಪಿಸಲು ಮುತುವರ್ಜಿ ತೋರಿಸುವ ಮೂಲಕ ದ.ಕ.ಜಿಲ್ಲಾ ಹೋಂಗಾರ್ಡ್ಸ್‌ ಕಮಾಂಡೆಂಟ್‌ ಅವರು ಮಾದರಿ ವೃಕ್ಷಪ್ರೇಮ ತೋರಿಸಿಕೊಟ್ಟಿದ್ದಾರೆ.

 

ನಗರದ ಬಾಳೆಬೈಲ್‌ನ ಗ್ರೀನ್‌ ಎಕರೇಸ್‌ ಲೇಔಟ್‌ನಲ್ಲಿ ಕಳೆದ 20 ದಿನಗಳ ಹಿಂದೆ ಭಾರಿ ಗಾಳಿ ಮಳೆಗೆ ಮಂದಾರ ಹಾಗೂ ದೇವದಾರು ಮರ ಧಾರಾಶಾಹಿಯಾಗಿತ್ತು. ರಸ್ತೆಬದಿ ಬಿದ್ದ ಮರವನ್ನು ಸಾಮಾನ್ಯವಾಗಿ ಕಡಿದು ತೆರವುಗೊಳಿಸಿದರೆ, ಹೋಂಗಾರ್ಡ್ಸ್‌ ಕಮಾಂಡೆಂಟ್‌ ಡಾ.ಮುರಲೀಮೋಹನ ಚೂಂತಾರು ಅವರು ಅದೇ ಸ್ಥಳದಲ್ಲಿ ಮರಗಳನ್ನು ಮರು ಸ್ಥಾಪಿಸಲು ನಿರ್ಧರಿಸಿದರು. ಸಸ್ಯಪ್ರೇಮಿ ಮಾಧವ ಉಳ್ಳಾಲ್‌ ಮಾರ್ಗದರ್ಶನದಲ್ಲಿ ಭಾನುವಾರ ಹೋಂಗಾರ್ಡ್ಸ್‌ ನೆರವಿನಲ್ಲಿ ಬೇರು ಸಹಿತ ಧಾರಾಶಾಹಿಯಾಗಿದ್ದ ಮಂದಾರ ಮರವನ್ನು ಅದೇ ಜಾಗದಲ್ಲಿ ಮರುಸ್ಥಾಪಿಸುವ ಕಾರ್ಯ ನಡೆಸಲಾಯಿತು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಅವಿರತ ಶ್ರಮದಿಂದ ಮರವನ್ನು ಯಶಸ್ವಿಯಾಗಿ ಮರುಸ್ಥಾಪಿಸಲಾಯಿತು. ಸುಮಾರು 8-10 ವರ್ಷದ ಮರ ಇದಾಗಿದ್ದು, ಮರುಸ್ಥಾಪಿಸಿದ ಹಿನ್ನೆಲೆಯಲ್ಲಿ ಸುಮಾರು 48 ದಿನಗಳಲ್ಲಿ ಮತ್ತೆ ಚಿಗುರಿ ಕೆಲವೇ ದಿನಗಳಲ್ಲಿ ಎಂದಿನಂತೆ ಕಂಗೊಳಿಸಲಿದೆ ಎಂದು ಮಾಧವ ಉಳ್ಳಾಲ್‌ ವಿವರಣೆ ನೀಡಿದರು. ಇನ್ನೊಂದು ದೇವದಾರು ಮರವನ್ನು ಮುಂದಿನ ವಾರದಲ್ಲಿ ಅದೇ ಸ್ಥಳದಲ್ಲಿ ಮರುಸ್ಥಾಪಿಸಲಾಗುವುದು ಎಂದು ಡಾ.ಮುರಲೀ ಮೋಹನ ಚೂಂತಾರು ತಿಳಿಸಿದರು. ಹೋಂಗಾರ್ಡ್ಸ್‌ ವತಿಯಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಿದ್ದ ಮರವನ್ನು ಅದೇ ಸ್ಥಳದಲ್ಲಿ ಮರು ಸ್ಥಾಪಿಸಿದ್ದು ಇದೇ ಪ್ರಥಮ ಪರಿಸರ ಸಂರಕ್ಷಣೆ ದಿಶೆಯಲ್ಲಿ ಹೋಂಗಾರ್ಡ್ಸ್‌ ತಂಡ ಕೂಡ ಕೈಜೋಡಿಸುತ್ತಿದೆ ಎಂದು ಅವರು ಹೇಳಿದರು.

error: Content is protected !!

Join the Group

Join WhatsApp Group