ಕಂದಾಯ ಇಲಾಖೆಯಲ್ಲಿ ಭೂಪರಿವರ್ತನೆಗೆ ಹೊಸ ಆಟ ► ಸರಕಾರದ ಸುತ್ತೋಲೆಯಿಂದಾಗಿ ಜನಸಾಮಾನ್ಯರ ಪರದಾಟ

(ನ್ಯೂಸ್ ಕಡಬ) newskadaba.com ಕಡಬ, ಫೆ.21. ಕಳೆದ ಹದಿನೈದು ದಿನಗಳಿಂದ ಸಾರ್ವಜನಿಕರಿಂದ ಭೂಪರಿವರ್ತನೆ ಕಾರ್ಯಕ್ಕೆ ಅರ್ಜಿ ಸ್ವೀಕಾರ ಮಾಡದೆ ಭೂಪರಿವರ್ತನೆಯನ್ನು ಸ್ಥಗಿತಗೊಳಿಸಲಾಗಿದ್ದು, ಇಡೀ ರಾಜ್ಯದಲ್ಲೇ ಭೂಪರಿವರ್ತನೆ ಕಾರ್ಯ ನಡೆಯುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಈ ಹಿಂದೆ ಅರ್ಜಿ ನೀಡಿದವರಿಗೆ ಮಾತ್ರ ಭೂಪರಿವರ್ತನೆ ಕಾರ್ಯ ನಡೆಯುತ್ತಿದೆ ಹೊರತು, ಹೊಸದಾಗಿ ಅರ್ಜಿಯನ್ನು ಸ್ವೀಕಾರ ಮಾಡುತ್ತಿಲ್ಲ. ಇದರಿಂದಾಗಿ ಮನೆ ಕಟ್ಟುವವರಿಗೆ, ಬ್ಯಾಂಕ್ ಸಾಲ ಮಾಡುವವರಿಗೆ ಇನ್ನಿಲ್ಲದ ತೊಂದರೆ ಉಂಟಾಗಿದೆ. ಸಾರ್ವಜನಿಕರಿಗೆ ಮನೆ ಕಟ್ಟಲು ಪಂಚಾಯಿತಿಯಿಂದ ಅನುಮತಿ ಪಡೆಯುವುದು ಹಾಗೂ ಮುಖ್ಯವಾಗಿ ಸರಕಾರದಿಂದ ಪಂಚಾಯಿತಿ ಮೂಲಕ ಮನೆಕಟ್ಟಲು ಸಹಾಯಧನ ಪಡೆಯುವುದಕ್ಕೆ ಭೂಪರಿವರ್ತನೆ ತೀರಾ ಅಗತ್ಯ. ಈಗ ಇದಕ್ಕೆಲ್ಲಾ ಬ್ರೇಕ್ ಬಿದ್ದಿದ್ದು, ಮನೆ ಕಟ್ಟಲು ಸರಕಾರದ ಸಹಾಧನಕ್ಕೆ ಅರ್ಜಿ ನೀಡುವುದಕ್ಕೂ ಕುತ್ತು ಬಂದಿದೆ. ಕಡಬ ತಹಶಿಲ್ದಾರ್ ಕಛೇರಿಯಲ್ಲಿ ತಿಂಗಳಿಗೆ ಏನಿಲ್ಲವೆಂದರೂ 500 ರಿಂದ 600 ಭೂಪರಿವರ್ತನೆ ಕಡತಗಳು ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಅದಕ್ಕೆ ತಡೆ ಬೀಳಲಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಕಂದಾಯ ಇಲಾಖಾ ಅಧಿಕಾರಿಯವರನ್ನು ಕೇಳಿದರೆ ನಮಗೆ ಭೂಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಅರ್ಜಿ ಸ್ವೀಕರಿಸದಂತೆ ಮೌಖಿಕ ಆದೇಶ ನೀಡಿದ್ದಾರೆ ಎನ್ನುವ ಉತ್ತರ ನೀಡುತ್ತಾರೆ. ಇತ್ತೀಚಿನ ತನಕ ಇದ್ದ ನಿಯಮಾವಳಿ ಪ್ರಕಾರ ಭೂಪರಿವರ್ತನೆಗೆ ತಹಶಿಲ್ದಾರ್ ಅವರಿಗೆ ಅರ್ಜಿ ನೀಡಿದರೆ, ಪರಿಶೀಲನೆಗೆ ಕಂದಾಯ ನಿರೀಕ್ಷಕರಿಗೆ ತನಿಖೆಗೆ ಕಡತ ಹೋಗುತ್ತದೆ. ಇದರೊಟ್ಟಿಗೆ ಸರ್ವೇ ಅಧಿಕಾರಿಗಳು ನಕ್ಷೆ ತಯಾರಿಸಿ ಕೊಡುತ್ತಾರೆ. ಬಳಿಕ ಗ್ರಾಮಕರಣಿಕರ ಇಂಡೆಕ್ಸ್ ಆಗಿ ಮತ್ತೆ ಕಂದಾಯ ನಿರೀಕ್ಷಕರ ಕೈಗೆ ಬಂದು ಭೂಪರಿವರ್ತನೆ ಕಾರ್ಯ ಕೊನೆಯಾಗುತ್ತದೆ. ಸರಕಾರದ ಆದೇಶದ ಪ್ರಕಾರ ಇನ್ನು ಮುಂದೆ ಹಾಗಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಭೂಮಿಯ ಐದು ಅಥವಾ ಹತ್ತು ಸೆಂಟ್ಸ್ ಭೂಮಿಯನ್ನು ವಾಣಿಜ್ಯ ಅಥವಾ ಮನೆ ನಿರ್ಮಾಣದ ಅನುಮತಿಗಾಗಿ ಭೂಪರಿವರ್ತನೆ ಮಾಡಬೇಕಿದ್ದರೆ 11 E ಗೆ ಹಣ ಕಟ್ಟಿ, ಭೂಮಿಯ ಪ್ಲಾಟಿಂಗ್ ಗೆ ಅರ್ಜಿ ಸಲ್ಲಿಸಬೇಕು. ಪ್ಲಾಟಿಂಗ್ ಆದ ಬಳಿಕವೇ ಮೂಲ ನಕ್ಷೆ ಹಾಗೂ ಪರಿಷ್ಕೃತ ಪಹಣಿ ಪತ್ರವನ್ನು ಇಟ್ಟು ಅರ್ಜಿ ಸಲ್ಲಿಸಿದರೆ ಮಾತ್ರ ಭೂಪರಿವರ್ತನೆಯ ಪ್ರಕ್ರಿಯೆ ಆರಂಭವಾಗುತ್ತದೆ. ಈ ಪ್ರಕ್ರಿಯೆ ತಿಂಗಳಗಟ್ಟಲೆ ಹಿಡಿಯುವುದರಿಂದ ಇದು ತೀರಾ ದೂರದ ಮಾತು. ಯಾಕೆಂದರೆ ಕಳೆದ ಆರೇಳು ವರ್ಷದಿಂದ ಯಾವುದೇ ಪ್ಲಾಟಿಂಗ್ ಸರಿಯಾಗಿ ನಡೆಯುತ್ತಿಲ್ಲ. ಕಡಬ ನಾಡ ಕಛೇರಿಯೊಂದರಲ್ಲೇ ನಾಲ್ಕು ನೂರಕ್ಕಿಂತಲೂ ಹೆಚ್ಚು ಅರ್ಜಿತ ಕಡತಗಳು ಧೂಳು ಹಿಡಿದು ಕೂತಿವೆ. ಈಗಿನ ಕಾನೂನು ಪ್ರಕಾರ ಒಬ್ಬ ವ್ಯಕ್ತಿಯ ಭೂಮಿಯ ಪ್ಲಾಟಿಂಗ್ ಮಾಡಬೇಕಾದರೆ, ಆ ಸರ್ವೇ ನಂಬರ್‌ ನ ಆ ಭಾಗದಲ್ಲಿರುವ ಎಲ್ಲಾ ಭೂಮಿಯ ಪ್ಲಾಟಿಂಗ್ ಒಟ್ಟಿಗೇ ನಡೆಯಬೇಕು. ಇದೇ ಕಾರಣಕ್ಕಾಗಿ ಅದೆಷ್ಟೋ ಕಡತಗಳು ಬಾಕಿ ಇವೆ. ಅದರಲ್ಲೂ ಅಕ್ರಮ-ಸಕ್ರಮ ಸಮಿತಿಯಲ್ಲಿ ಮಂಜೂರಾದ ಭೂಮಿಯನ್ನು ಪ್ಲಾಟಿಂಗ್ ಮಾಡಲು ಸಾಧ್ಯವಾಗುತ್ತಲೇ ಇಲ್ಲ. ಇನ್ನು ಏಕವ್ಯಕ್ತಿ ಕೋರಿಕೆಯಲ್ಲಿ ಮಾಡಬಹುದಾದ ಪ್ಲಾಟಿಂಗ್ ವ್ಯವಸ್ಥೆಗೆ ತೊಡಕಾಗುತ್ತದೆ. ಇಲ್ಲಿ ಆಕಾರ್ ಬಂದ್ ಹಾಗೂ ಪಹಣಿ ಪತ್ರ ಸರಿಹೊಂದುವುದಿಲ್ಲ ಎನ್ನುವ ಕಾರಣಕ್ಕಾಗಿ ಅದೂ ಕೂಡಾ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ.

Also Read  ದೂರವಾಣಿ ಕರೆಮಾಡಿ ಜೀವಬೆದರಿಕೆ- ದೂರು ದಾಖಲು

ಈ ಸಮಸ್ಯೆಯನ್ನು ಇಂದಿನ ಸರಕಾರದ ಸಚಿವರು ಹಾಗೂ ಜನಪ್ರತಿನಿಧಿಗಳಲ್ಲಿ ಸಾರ್ವಜನಿಕರು ಅನೇಕ ಬಾರಿ ನಿವೇದನೆ ಮಾಡಿಕೊಂಡರೆ, ಈ ಸಮಸ್ಯೆ ಹಿಂದಿನ ಸರಕಾರದ ಕೊಡುಗೆ ಎನ್ನುವ ಉತ್ತರ ಮಾತ್ರ ದೊರೆಯುತ್ತಿದೆಯೇ ಹೊರತು ಸಮಸ್ಯೆ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಸಾಗಲೇ ಇಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೆಲವು ವರ್ಷದ ಹಿಂದೆ ಕೂಡಾ ಇಂತಹದೇ ಆದೇಶದ ಬಿಸಿ ಒಮ್ಮೆ ತಟ್ಟಿತ್ತು. ಆದರೆ ಅದು ಅಲ್ಲಿಗೇ ತಣ್ಣಗಾಗಿತ್ತು. ಇದೀಗ ಮತ್ತೆ ಬೇತಾಳನಂತೆ ಕಾಡಲಾರಂಭಿಸಿದೆ.

Also Read  ಡಿ.7- ಆರೋಗ್ಯ ಸುರಕ್ಷಾ ಕಾರ್ಡ್, ಬೋಟ್ ಮಾಲಕರಿಗೆ ಪ್ರೋತ್ಸಾಹಕ ಉಡುಗೊರೆ ವಿತರಣೆ

ಸರ್ವೇ ಇಲಾಖೆಯ ರಾಜ್ಯ ಕಮಿಷನರ್ ಆದೇಶ ಹೊರಡಿಸಿ, ಈಗ ಮಾಡುತ್ತಿರುವ ಭೂಪರಿವರ್ತನೆ ಕಾನೂನು ಬಾಹಿರವಾಗಿದೆ. ಕಾನೂನು ತಿದ್ದುಪಡಿ ಆದ ಬಳಿಕವಷ್ಟೇ ಭೂಪರಿವರ್ತನೆ ಕಾರ್ಯ ಮಾಡಬೇಕು. ಅಲ್ಲಿಯ ತನಕ ಆ ಕಾರ್ಯವನ್ನು ಸ್ಥಗಿತಗೊಳಿಸಬೇಕೆಂದು ಹೇಳಿದ್ದಾರೆ. ಈ ಹಿನ್ನೆಯಲ್ಲಿ ಈಗ ಯಾವುದೇ ಅರ್ಜಿಗಳನ್ನು ಪಡೆಯದಂತೆ ಸೂಚಿಸಲಾಗಿದೆ. ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಕುಸುಮಾಧರ ಗೌಡ 
ಭೂ ದಾಖಲೆಗಳ ಉಪನಿರ್ದೇಶಕರು, ಮಂಗಳೂರು

error: Content is protected !!
Scroll to Top