(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಆ. 16. ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ದಾಳಿ, ಹಿಂಸಾಚಾರ ಮತ್ತು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳಿ ತಿಳಿಸಿವೆ.
ಬಂಧಿತರನ್ನು ನಗರದ ನ್ಯಾಯಾಲಯವು ಆಗಸ್ಟ್ 22ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ಬುಧವಾರದಂದು ತಡರಾತ್ರಿ ನುಗ್ಗಿದ ದುಷ್ಕರ್ಮಿಗಳು, ಆಸ್ಪತ್ರೆಯ ಕಟ್ಟಡ, ತುರ್ತು ವಿಭಾಗ, ಶುಶ್ರೂಷಾ ಕೇಂದ್ರ, ವೈದ್ಯಕೀಯ ಯಂತ್ರೋಪಕರಣ, ಪೀಠೋಪಕರಣ, ಔಷಧ ಕೇಂದ್ರ, ಹೊರರೋಗಿ ವಿಭಾಗ ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೇ ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಆಗಸ್ಟ್ 9ರಂದು ನಡೆದಿದ್ದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.