ದೇಶಕ್ಕೇ ಮಾದರಿಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ► ಸುಸಜ್ಜಿತ ಕಟ್ಟಡಕ್ಕೆ 1.25 ಕೋಟಿ ವೆಚ್ಚ ಮಾಡಿದ ಇಬ್ಬರು ಹಳೆ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.21. ಕನ್ನಡ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದರೂ ಬಳಿಕ ಅವರು ತಾವು ಕಲಿತ ಶಾಲೆಗಳತ್ತ ಮುಖ ಮಾಡಲ್ಲ. ಆದರೆ ವಿಟ್ಲದ ಸರ್ಕಾರಿ ಶಾಲೆಯ ಇಬ್ಬರು ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಕೋಟ್ಯಾಂತರ ರೂ. ಹಣವನ್ನು ದೇಣಿಗೆ ನೀಡುವುದರ ಮೂಲಕ ಶಾಲೆಗೆ ಅಭ್ಯುದಯಕ್ಕೆ ಶ್ರಮಿಸಿ, ಇಡೀ ರಾಜ್ಯದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ವಿಟ್ಲದ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳಿಬ್ಬರ ಪೈಕಿ ಒಬ್ಬರು ಶಾಲೆಯನ್ನು ದತ್ತು ಪಡೆದು ಶಾಲೆಯನ್ನು ಅಭಿವೃದ್ಧಿಪಡಿಸುವುದರ ಮೂಲಕ ಮುಚ್ಚಿವ ಭೀತಿಯಲ್ಲಿದ್ದ ಕನ್ನಡ ಶಾಲೆಯನ್ನು ಉಳಿಸಿದರೆ, ಇನ್ನೊಬ್ಬರು  1.25 ಕೋಟಿ ರೂ. ವೆಚ್ಚದ ಮೂರು ಮಹಡಿಯ 10 ತರಗತಿ ಕೋಣೆಗಳ ಸುಸಜ್ಜಿತ ಕಟ್ಟಡ ಮತ್ತು ಸಭಾಭವನದ ಬೃಹತ್ ಕಟ್ಟಡವನ್ನು ನಿರ್ಮಿಸಿ ಕೊಟ್ಟು ತಾವು ಕಳಿತ ಶಾಲೆಯ ಋಣ ತೀರಿಸಿದ್ದಾರೆ. ಬಂಟ್ವಾಳ ತಾಲ್ಲೂಕಿನ ವಿಟ್ಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಹಳೆ ವಿದ್ಯಾರ್ಥಿಗಳ ಅಭೂತಪೂರ್ವ ಕೊಡುಗೆಯಿಂದ ಖಾಸಗಿ ಶಾಲೆಗಳು ನಾಚುವ ರೀತಿಯಲ್ಲಿ ಶಿಕ್ಷಣ ನೀಡುತ್ತಿದೆ. 1879ರಲ್ಲಿ ಪ್ರಾರಂಭಗೊಂಡಿರುವ ಈ ಶಾಲೆಯು ಶತಮಾನೋತ್ಸವ ಹಾಗೂ ಶತಮಾನೋತ್ತರ ಬೆಳ್ಳಿಹಬ್ಬವನ್ನು ಆಚರಿಸಿದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸರ್ಕಾರಿ ಶಾಲೆಯೆಂಬ ಹೆಗ್ಗಳಿಕೆ ಕಾರಣವಾಗಿದೆ. ಇಲ್ಲಿಯ ವ್ಯವಸ್ಥೆಗಳು ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ.

ವಿಟ್ಲ ಮೂಲದ ಅಂತರಾಷ್ಟ್ರೀಯ ಮಟ್ಟದ ಉದ್ಯಮಿ ಬೆಂಗಳೂರು ಸುಪ್ರಜಿತ್ ಆಫ್ ಇಂಡಸ್ಟ್ರೀಸ್‌ ನ ಆಡಳಿತ ನಿರ್ದೇಶಕ, ವಿಟ್ಲದ ಖ್ಯಾತ ವೈದ್ಯ ದಿ| ಡಾ. ಮಂಜುನಾಥ ರೈ ಅವರ ಪುತ್ರ ಅಜಿತ್ ಕುಮಾರ್ ರೈ ಅವರು ಈ ಶಾಲೆಯ ಬಗ್ಗೆ ಆಸಕ್ತಿ ವಹಿಸಿ ಶಾಲೆಗೆ 1.25 ಕೋಟಿ ರೂ. ವೆಚ್ಚದ ಮೂರು ಮಹಡಿಯ 10 ತರಗತಿ ಕೋಣೆಗಳ ಸುಸಜ್ಜಿತ ಕಟ್ಟಡ ಮತ್ತು ಸಭಾಮಂದಿರದ ಬೃಹತ್ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಗ್ರಾನೈಟ್ ನೆಲದಿಂದ ಶೋಭಿಸುವ “ಶ್ರೀಮತಿ ಮತ್ತು ಡಾ. ಕೆ ಮಂಜುನಾಥ ರೈ ವಿದ್ಯಾ ಸೌಧ” ನೂತನ ಕಟ್ಟಡ ಸಿದ್ಧವಾಗಿದ್ದು, ಫೆಬ್ರವರಿ 22 ಗುರುವಾರದಂದು ಲೋಕಾರ್ಪಣೆಗೊಳ್ಳಲಿದೆ. ಈ ಹಿಂದೆ 2.5 ಲಕ್ಷ ವೆಚ್ಚದಲ್ಲಿ ಬಾಲಕಿಯರ ಶೌಚಾಲಯ ನಿರ್ಮಿಸಿದ್ದಾರೆ. ಅಜಿತ್ ಕುಮಾರ್ ರೈ ಅವರು ಪ್ರತಿವರ್ಷವೂ ಸಾವಿರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ. ವಿದ್ಯಾರ್ಥಿ ವೇತನ ನೀಡಿ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಇವರ ಶಿಕ್ಷಣ ಪ್ರೀತಿಗೆ ವಿಟ್ಲದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also Read  ಸುಬ್ರಹ್ಮಣ್ಯ: ಅಪರಿಚಿತ ವ್ಯಕ್ತಿ ಮೃತ್ಯು

1934-1969ರ ನಡುವೆ 1300 ವಿದ್ಯಾರ್ಥಿಗಳಿದ್ದರು. ಶಾಲಾ ಶತಮಾನೋತ್ಸವ ವೇಳೆ 960 ವಿದ್ಯಾರ್ಥಿಗಳ ಸಂಖ್ಯೆ ಇತ್ತು. ಬೆಳ್ಳಿಹಬ್ಬದ ವೇಳೆಗೆ 653 ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ 400ಕ್ಕೆ ಇಳಿಯುತ್ತಿದ್ದಂತೆ ವಿಟ್ಲದ ಖ್ಯಾತ ಉದ್ಯಮಿ ಜನಾರ್ದನ ಪೈ ಅವರ ಪುತ್ರ ಯುವ ಉದ್ಯಮಿ ಸುಬ್ರಾಯ ಪೈ ಅವರು ಭಾರತಿ ಜನಾರ್ದನ್ ಸೇವಾ ಟ್ರಸ್ಟ್‌ ಮೂಲಕ ಈ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಗೆ ಕಾಯಕಲ್ಪ ನೀಡಿದರು. ರಂಗಮಂದಿರ, ಶತಮಾನೋತ್ಸವ ಕಟ್ಟಡದ ಕೋಣೆಗೆ ಟೈಲ್ಸ್‌ ಅಳವಡಿಕೆ, ಕಟ್ಟಡಗಳ ದುರಸ್ತಿ, ವಿಜ್ಞಾನ ಪ್ರಯೋಲಯಕ್ಕೆ ಸಾಮಗ್ರಿಗಳ ಪೂರೈಕೆ, ಕ್ರೀಡೋಪಕರಣಗಳು, ಪುಸ್ತಕ ಕೊಡುಗೆ, ಆರು ಗೌರವ ಶಿಕ್ಷಕರ ನೇಮಿಸಿ, ಅವರಿಗೆ ವೇತನ ನೀಡಲಾಗುತ್ತಿದೆ. 6ರಿಂದ 8ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಅಡುಗೆ ಕೋಣೆ ವಿಸ್ತರಣೆ, ಆವರಣ ಗೋಡೆ, ಸ್ಮಾರ್ಟ್ ಬಾಲವಾಡಿ ಕೇಂದ್ರ ಪ್ರಾರಂಭಿಸಿದ್ದು, 64 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೊಳವೆ ಬಾವಿ ದುರಸ್ತಿಗೊಳಿಸಿ ವರ್ಷವಿಡಿ ನೀರಿನ ಸಮಸ್ಯೆ ಉದ್ಭವಿಸದಂತೆ ಮಾಡಿದ್ದಾರೆ. ಕನಿಷ್ಠ ದರದಲ್ಲಿ ವಿಟ್ಲ ಸುತ್ತಮುತ್ತಲಿನ ಹಳ್ಳಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬಸ್ಸುಗಳ ವ್ಯವಸ್ಥೆ ಮಾಡಿದರು. ಈ ಕೊಡುಗೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 570 ಕ್ಕೇರಿದೆ. ಈ ಶಾಲೆಯ ಸುತ್ತ 5 ಖಾಸಗಿ ಕನ್ನಡ ಮತ್ತು ಆ0ಗ್ಲ ಮಾಧ್ಯಮ ಶಾಲೆಗಳಿದ್ದರೂ, ಈ ಸರಕಾರಿ ಶಾಲೆಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ.

Also Read  ಸೋಮವಾರ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ

ಅಜಿತ್ ಕುಮಾರ್ ರೈ ಮತ್ತು ಸುಬ್ರಾಯ ಪೈ ಇಬ್ಬರೂ ಈ ಶಾಲಾ ಹಿರಿಯ ವಿದ್ಯಾರ್ಥಿಗಳು ಮಾತ್ರವಲ್ಲದೇ ಇವರಿಬ್ಬರೂ ಈ ಶಾಲಾ ದೊಡ್ಡ ಅಭಿಮಾನಿಗಳು ಮಾತ್ರವಲ್ಲ ಮಹಾ ಪೋಷಕರೂ ಆಗಿದ್ದಾರೆ. ಸರ್ಕಾರ ಇಂದು ಸರ್ಕಾರಿ ಶಾಲೆಗಳನ್ನು ಉಳಿಸುತ್ತೇವೆ. ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಿದೆ ಎಂದು ಬೊಗಲೆ ಬಿಡುತ್ತಿದೆ ಹೊರತು ಯಾವುದನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಕೇವಲ ಬೆರಳೆಣಿಯಷ್ಟು ಮೂಲಭೂತ ಸೌಕರ್ಯ ಒದಗಿಸಿ ಕೈ ತೊಳೆದುಕೊಳ್ಳುತ್ತಿದೆ. ಶಾಲೆಗಳಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಬಗ್ಗೆ ವಿಶಿಷ್ಟ ಗೌರವ ಅಭಿಮಾನ ತೋರಿದಾಗ ಸರ್ಕಾರಿ ಶಾಲೆಗಳು ಉನ್ನತಮಟ್ಟಕ್ಕೆ ಏರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದಕ್ಕೆ ಶಾಲೆ ಒಂದು ಉದಾಹರಣೆಯಾಗಿದೆ. ಪ್ರತಿ ಊರಿನ ಹಳೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಉನ್ನತೀಕರಣದ ಅಗತ್ಯತೆಯನ್ನು ಕಂಡುಕೊಂಡಲ್ಲಿ ಇಡೀ ದೇಶದ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಯನ್ನು ಮೀರಿ ವಿದ್ಯಾರ್ಥಿಗಳಿಗೆ ಅವರ ಸರ್ವೋತೋಮುಖ ಅಭಿವೃದ್ಧಿಯ ಶಿಕ್ಷಣ ಕೊಟ್ಟು ದೇಶದ ಶ್ರೇಷ್ಠ ನಾಗರೀಕರಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಬಹುದು.

Also Read  ಕೇಂದ್ರ ಬಜೆಟ್‍ನಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣಕ್ಕೆ ಒತ್ತು ➤ ಮಟ್ಟಾರ್ ರತ್ನಾಕರ್ ಹೆಗ್ಡೆ

error: Content is protected !!
Scroll to Top