ಕೂಳೂರು ಸೇತುವೆ ದುಸ್ಥಿತಿ- ಘನ ವಾಹನಗಳ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 16. ಕರಾವಳಿಯಲ್ಲಿನ ಹಲವು ಸೇತುವೆಗಳ ಮೇಲೆ ವಾಹನ ನಿರ್ಬಂಧದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಒಂದೊಂದೇ ಹಳೆಯ ಸೇತುವೆಗಳ ಮೇಲಿನ ವಾಹನ ಸಂಚಾರವನ್ನು ನಿರ್ಬಂಧಿಸುತ್ತಾ ಬರುತ್ತಿದೆ. ಇದೀಗ ಕೂಳೂರು ಹಳೆ ಸೇತುವೆ ದುರಸ್ತಿ ಕಾಮಗಾರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆ ಘನ ವಾಹನಗಳು ನಿಗದಿತ ಸಮಯದಲ್ಲಿ ಮಾತ್ರ ಸಂಚರಿಸುವಂತೆ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ.

 

ಅಗಸ್ಟ್ 19, 20, 21ರಂದು ಮೂರು ದಿನ ಘನ ವಾಹನಗಳು (ಪ್ರಯಾಣಿಕರ ಬಸ್ಸು ಹೊರತುಪಡಿಸಿ) ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಹಾಗೂ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ವರೆಗಿನ ಅವಧಿಯಲ್ಲಿ ಮಾತ್ರ ಈ ಸೇತುವೆಯಲ್ಲಿ ಸಂಚರಿಸಲು ಅನುಮತಿಸಲಾಗುವುದು.

Also Read  ಧರ್ಮಸ್ಥಳ: ಕೆಎಸ್ಸಾರ್ಟಿಸಿಯ ಅವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದ ಬಸ್ ಚಾಲಕ ► ನಿಗಮದ ಮಾನವನ್ನು ಹರಾಜು ಹಾಕಿದ್ದ ರಮೇಶ್ ಕೊನೆಗೂ ಅಮಾನತು

ಈ ದಿನಗಳಂದು ಬೆಳಿಗ್ಗೆ 6ರಿಂದ 11ರ ವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 10ರ ಅವಧಿಯಲ್ಲಿ ಉಡುಪಿ ಕಡೆಯಿಂದ ಕೇರಳಕ್ಕೆ ಸಂಚರಿಸುವ ಘನ ವಾಹನಗಳು ಮೂಲ್ಕಿ-ಸುರತ್ಕಲ್‌-ಎಂಆರ್‌ಪಿಎಲ್‌-ಬಜಪೆ-ಕೆಪಿಟಿ-ನಂತೂರು ಮಾರ್ಗವಾಗಿ ಹಾಗೂ ಉಡುಪಿ ಕಡೆಯಿಂದ ಬೆಂಗಳೂರು ಸಂಚರಿಸುವ ವಾಹನಗಳು ಉಡುಪಿ-ಮೂಲ್ಕಿ-ಮೂಡುಬಿದಿರೆ-ಬಂಟ್ವಾಳ ಮಾರ್ಗವಾಗಿ ಸಂಚರಿಸಬೇಕು. ಈ ಮಾರ್ಪಾಡು ಅಗತ್ಯವಿದ್ದರೆ ಆಗಸ್ಟ್‌ 25ರಿಂದ ಸೆಪ್ಟೆಂಬರ್‌ 25ರ ವರೆಗೆ ವಿಸ್ತರಿಸಲಾಗುವುದು. ಸೆಪ್ಟೆಂಬರ್‌ 25ರ ಒಳಗಾಗಿ ಸೇತುವೆಯ ಕೆಲಸವನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.

error: Content is protected !!
Scroll to Top