(ನ್ಯೂಸ್ ಕಡಬ) newskadaba.com ಕಾಣಿಯೂರು, ಫೆ.21. ಜಲ್ಲಿ ಸಾಗಾಟದ ಟಿಪ್ಪರ್ ಮತ್ತು ಮರಳು ಸಾಗಾಟಕ್ಕೆಂದು ತೆರಳುತ್ತಿದ್ದ ಟಿಪ್ಪರ್ ನಡುವೆ ಪುತ್ತೂರು – ಕಾಣಿಯೂರು ರೈಲ್ವೇ ಮೇಲ್ಸೇತುವೆ ಬಳಿ ಢಿಕ್ಕಿಯುಂಟಾಗಿದ್ದು, ಜಲ್ಲಿ ಸಾಗಾಟದ ಟಿಪ್ಪರ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭಾವ್ಯ ಅಪಾಯವೊಂದು ತಪ್ಪಿದಂತಾಗಿದೆ.
ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ಜಲ್ಲಿ ಸಾಗಾಟದ ಟಿಪ್ಪರ್ ಗೆ ಕಾಣಿಯೂರು ಸಮೀಪದ ಗಡಿಪಿಲ ಎಂಬಲ್ಲಿ ತಿರುವಿನಲ್ಲಿ ಅತೀ ವೇಗವಾಗಿ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದ್ದು, ಜಲ್ಲಿ ಸಾಗಾಟದ ಟಿಪ್ಪರ್ ಚಾಲಕ ರಸ್ತೆ ಬಿಟ್ಟು ಕೆಳಗಡೆ ಇಳಿಸಿದ್ದಾರೆ. ಇಲ್ಲದಿದ್ದಲ್ಲಿ ಗಡಿಪಿಲ ರೈಲ್ವೇ ಮೇಲ್ಸೇತುವೆಯ ಸೇಫ್ ಗಾರ್ಡ್ ಗೆ ಢಿಕ್ಕಿಯಾಗಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತೆನ್ನಲಾಗಿದೆ. ಮರಳು ಸಾಗಾಟದ ಟಿಪ್ಪರ್ ಗಳ ಮಿತಿಮೀರಿದ ವೇಗದಿಂದಾಗಿ ಉಳಿದ ವಾಹನಗಳ ಸಂಚಾರವು ದುಸ್ತರವಾಗಿದೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ ಎನ್ನುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಾರೆ. ಏನಾದರೂ ಅನಾಹುತ ಸಂಭವಿಸುವ ಮೊದಲೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ.