(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 15. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ರಾಜಧಾನಿಯ ಕೆಂಪು ಕೋಟೆಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದು, ಈ ಮೂಲಕ ಕಳೆದ 10 ವರ್ಷಗಳಲ್ಲಿ ಪಾಲ್ಗೊಂಡ ಲೋಕಸಭೆಯ ಮೊದಲ ವಿಪಕ್ಷ ನಾಯಕರಾಗಿದ್ದಾರೆ.
ಭಾರತದ ಒಲಿಂಪಿಕ್ ಕಂಚಿನ ಪದಕ ವಿಜೇತ ಹಾಕಿ ತಂಡ ಹಾಗೂ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ರಾಹುಲ್ ಗಾಂಧಿ ಜೊತೆಗಿದ್ದು, ಒಲಿಂಪಿಕ್ಸ್ ಪದಕ ವಿಜೇತರಾದ ಮನು ಭಾಕರ್, ಸರಬ್‌ಜೋತ್ ಸಿಂಗ್, ಪಿ ಆರ್ ಶ್ರೀಜೇಶ್ ಮತ್ತಿತರರ ಜೊತೆ ಕುಳಿತಿರುವುದು ಕಾಣಿಸಿದೆ. ಕಳೆದ ಹತ್ತು ವರ್ಷಗಳಿಂದ ವಿಪಕ್ಷ ನಾಯಕನ ಸ್ಥಾನ ಪಡೆಯಲು ಯಾವುದೇ ವಿಪಕ್ಷ ಅಗತ್ಯವಿರುವಷ್ಟು ಸಂಖ್ಯೆಯ ಸಂಸದರನ್ನು ಹೊಂದಿರದೇ ಇದ್ದುದರಿಂದ ಲೋಕಸಭೆಯ ವಿಪಕ್ಷ ನಾಯಕ ಹುದ್ದೆ ಖಾಲಿಯಿತ್ತು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 99 ಸ್ಥಾನಗಳನ್ನು ಪಡೆದ ಬಳಿಕ ರಾಹುಲ್ ಗಾಂಧಿ ಅವರನ್ನು ಜೂನ್ 25ರಂದು ಲೋಕಸಭೆಯ ವಿಪಕ್ಷ ನಾಯಕರನ್ನಾಗಿ ನೇಮಿಸಲಾಗಿತ್ತು.