(ನ್ಯೂಸ್ ಕಡಬ) newskadaba.com ಕಡಬ, ಆ. 15. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ (ರಿ.) ಬೆಳ್ತಂಗಡಿ ಮತ್ತು ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ ಇವುಗಳ ಜಂಟಿ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರ ಯೋಜನೆಯಂತೆ ನಶಾ ಮುಕ್ತ ಭಾರತ ಅಭಿಯಾನದಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಆಗಸ್ಟ್ 13ರಂದು ಹನುಮಾನ್ ನಗರ ಕೇವಳ, ಕಡಬದಲ್ಲಿ ನಡೆಯಿತು.
ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರು ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಶಿವಪ್ರಸಾದ್ ಮೈಲೇರಿ ದೀಪ ಬೆಳಗಿಸಿ ಉದ್ಘಾಟಿಸಿ, ಸ್ವಾಸ್ಥ್ಯ ಸಂಕಲ್ಪದ ಆಶಯವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಉದ್ಘಾಟನಾ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಜೆ.ಸಿ.ಐ ವಲಯ ತರಬೇತುದಾರ ಸ.ಹಿ.ಪ್ರಾ ಶಾಲೆ ಶಾಂತಿನಗರ ಇಲ್ಲಿನ ಮುಖ್ಯಗುರುಗಳಾದ ಶ್ರೀ ಪ್ರದೀಪ್ ಬಾಕಿಲರವರು ಇಂದು ಹಸಿವಿನಿಂದ ಸಾಯುವವರಿಗಿಂತ ದುಶ್ಚಟಗಳಿಂದ ಸಾಯುವವರ ಸಂಖ್ಯೆ ಹೆಚ್ಚು, ವ್ಯಸನದ ಚಟದಿಂದ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಉಂಟಾಗುವ ಅನಾಹುತಗಳ ಬಗ್ಗೆ ವಿವರಿಸಿ ವಿದ್ಯಾರ್ಥಿಗಳು ಸಂಸ್ಕಾರ ಜೀವನ ನಡೆಸಲು ಪೂರಕವಾಗಿ ತಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ಆದರ್ಶಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪ್ರೌಢವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ಶೈಲಶ್ರೀ ಎಸ್ ರೈ ವಹಿಸಿ ವಿದ್ಯಾರ್ಥಿಗಳು ಮಾದಕ ವ್ಯಸನಗಳಿಗೆ ಒಳಗಾಗದೆ ತಮ್ಮ ಹೆತ್ತವರ ಗೌರವ ಕನಸುಗಳಿಗೆ ದಾರಿದೀಪವಾಗಬೇಕೆಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಡಬ ವಲಯದ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಮತಿ ಪಿ ವೈ ಕುಸುಮ ಹಿತನುಡಿಗಳನ್ನಾಡಿದರು. ಕಡಬ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಳಿನಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ವಲಯದ ಮೇಲ್ವಿಚಾರಕರಾದ ಶ್ರೀ ವಿಜೇಶ್ ಜೈನ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರಾದ ಶರಣ್ಯ ಜೆ.ಕೆ ಹಾಗೂ ವಂದನ ಕೆ ಪ್ರಾರ್ಥಿಸಿದರು. ಕಡಬ ಅಡ್ಡಗದ್ದೆ ಇಲ್ಲಿನ ಸೇವಾ ಪ್ರತಿನಿಧಿ ಶ್ರೀಮತಿ ನಳಿನಿ ವಂದಿಸಿ, ಶಿಕ್ಷಕಿ ಶ್ರೀಮತಿ ಸೌಮ್ಯ ಕೆ.ಎ ಕಾರ್ಯಕ್ರಮ ನಿರೂಪಿಸಿದರು.