(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 14. ಬಾಳುಪೇಟೆ ಮತ್ತು ಸಕಲೇಶಪುರ ನಡುವೆ ಉಂಟಾದ ಭೂಕುಸಿತದಿಂದಾಗಿ ಹಾನಿಗೊಳಗಾದ ರೈಲ್ವೇ ಹಳಿಯನ್ನು ದುರಸ್ತಿ ಮಾಡಲಾಗಿದ್ದು, ಹೀಗಾಗಿ ಇಂದಿನಿಂದ ಬೆಂಗಳೂರು- ಮಂಗಳೂರು ನಡುವೆ ರೈಲು ಸೇವೆಯನ್ನು ಪುನರಾರಂಭಿಸುವುದಾಗಿ ನೈಋತ್ಯ ರೈಲ್ವೇ ಇಲಾಖೆ ತಿಳಿಸಿದೆ. ಅಧಿಕಾರಿಗಳ ಪ್ರಕಾರ, ಬೆಂಗಳೂರು-ಮಂಗಳೂರು ಹಾಗೂ ಕಾರವಾರ ಸೆಕ್ಟರ್‌ನಲ್ಲಿ ರಾತ್ರಿಯ ಮೂರು ರೈಲುಗಳನ್ನು ಕಡಿಮೆ ಅವಧಿಗೆ ನಿಲ್ಲಿಸಲಾಗಿದೆ.
ಆಗಸ್ಟ್ 10 ರಂದು ಮುಂಜಾನೆ ವೇಳೆ ಮೈಸೂರು ವಿಭಾಗದ ಬಾಳುಪೇಟೆ ಮತ್ತು ಸಕಲೇಶಪುರ ನಡುವೆ ಭೂಕುಸಿತ ಸಂಭವಿಸಿದ ಪರಿಣಾಮ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಜುಲೈ 26 ರಿಂದ ಆಗಸ್ಟ್ 9 ರವರೆಗೆ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ಮಾರ್ಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ ರೈಲು ಸಂಚಾರಕ್ಕೆ ಪರಿಣಾಮ ಬೀರಿತ್ತು.