ಅಡಿಕೆ ಬೆಂಬಲ ಬೆಳೆ; ಸರಕಾರಕ್ಕೆ ಪ್ರಸ್ತಾವನೆ – ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14. ಅಡಿಕೆ ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದ್ದಾರೆ. ಈ ಕುರಿತು ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ರೈತ ಮುಖಂಡರೊಂದಿಗೆ ನಡೆದ ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಡಿಕೆಗೆ ಬೆಂಬಲ ಬೆಲೆ ನೀಡಬೇಕೆಂದು ರೈತರಿಂದ ಒತ್ತಾಯ ಇದೆ. ಈ ಬಗ್ಗೆ ಪರಿಶೀಲಿಸಿ, ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಹೇಳಿದರು.

ಬೆಳೆಗಳ ರಕ್ಷಣೆಗೆ ರೈತರಿಗೆ ನೀಡುವ  ಕೋವಿ ಪರವಾನಿಗೆಯನ್ನು ಸರಳೀಕರಣ ಮಾಡಲು ಪ್ರಯತ್ನಿಸಲಾಗುವುದು. ತಂದೆ  ಮರಣದ ನಂತರ  ಮಗನಿಗೆ  ಕೋವಿ ಪರವಾನಿಗೆಯನ್ನು ಹಸ್ತಾಂತರಿಸುವ ಬಗ್ಗೆ ಗೊಂದಲಗಳನ್ನು ಸರಿಪಡಿಸಲಾಗುವುದು.  ಕೋವಿ ಪರವಾನಿಗೆ ಅರ್ಜಿಗಳ ತ್ವರಿತ ವಿಲೇವಾರಿಗೆ ಕೆಳ ಕಚೇರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ರೈತರ ಜಮೀನುಗಳ ದಾಖಲೆಗಳ ಗೊಂದಲ ತಪ್ಪಿಸಲು ಪೋಡಿಮುಕ್ತ ಅಭಿಯಾನ ನಡೆಸಲಾಗುತ್ತಿದ್ದು, ಇದಕ್ಕೆ ರೈತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮಂಗ ಮತ್ತು ನವಿಲುಗಳ ದಾಳಿಯಿಂದ ಬೆಳೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಮಂಗ ಮತ್ತು ನವಿಲುಗಳ ಪ್ರತ್ಯೇಕ ಪಾರ್ಕ್ ಮಾಡುವ ಬಗ್ಗೆ ಪರಿಶೀಲಿಸಲಾಗುವುದು. ಪ್ರಾಣಿಗಳ ಹಾವಳಿಯಿಂದ ತೆಂಗು ಅಡಿಕೆ ಹಾನಿಯಾದಲ್ಲಿ ಪರಿಹಾರವನ್ನು ನೀಡುವ ಯಾವುದೇ ಯೋಜನೆಗಳಿಲ್ಲ. ಆದರೆ ಮರಗಳು ಹಾನಿಯಾದಲ್ಲಿ ಪರಿಹಾರಗಳನ್ನು ನೀಡಲಾಗುತ್ತದೆ ಎಂದರು.

Also Read  ಕೊಂಬೆಟ್ಟು ಕಾಲೇಜಿನಲ್ಲಿ ಮತ್ತೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ➤ ಇಬ್ಬರು ಗಂಭೀರ

ವಿದ್ಯುತ್ ಪ್ರಸರಣ ಮಾರ್ಗವನ್ನು ಸ್ಥಾಪಿಸಲು ರೈತರ ಜಮೀನುಗಳನ್ನು ಅಗೆಯುವಂತ ಕೆಲಸವಾಗುತ್ತಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಕಾನೂನು ಬಾಹಿರವಾಗಿ ಖಾಸಗಿ ಕಂಪನಿಯವರು ಇಂಥ ಕೆಲಸವನ್ನು ನಡೆಸುತ್ತಿದ್ದಾರೆ ಎಂದು ಎಂದು ರೈತಮುಖಂಡರು ತಿಳಿಸಿದರು. ಜಿಲ್ಲಾಧಿಕಾರಿಯವರು ಮಾತನಾಡಿ, ವಿದ್ಯುತ್ ಪ್ರಸರಣ ಮಾರ್ಗಗಳನ್ನು ಅಗೆಯುವುದು  ಕಾನೂನುಬಾಹಿರವಲ್ಲ. ಇದು ಸರ್ಕಾರದ ಒಂದು ಕೆಲಸವಾಗಿದೆ.  ಇದರ ಬಗ್ಗೆ ಮಾಲಿಕತ್ವ ಹೊಂದಿರುವ ಕಂಪನಿಯವರನ್ನು ಕರೆದು ರೈತ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತದೆ ಎಂದರು.

ರೈತರ ಕೃಷಿ ನೀರಾವರಿ ಪಂಪ್ ಸೆಟ್‍ಗಳಿಗೆ ಆಧಾರ್ ಜೋಡಣೆ ಮಾಡುವ ಕಾರ್ಯವು ಪ್ರಗತಿಯಲ್ಲಿದ್ದು ಡೆಪಾಸಿಟ್, ಕರಾರು ಪತ್ರ ಮತ್ತು ಅರ್ಜಿ ಶುಲ್ಕ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದಾಗ ಕೃಷಿ ನೀರಾವರಿ ಪಂಪುಸೆಟ್‍ಗಳಿಗೆ ಆಧಾರ್ ಜೋಡಣೆ ಕಾರ್ಯವನ್ನು ಮೆಸ್ಕಾಂನ ಅಧಿಕಾರಿಗಳು ನಿರ್ವಹಿಸುತ್ತಿದ್ದು, ಸದರಿ ಪ್ರಕ್ರಿಯೆಗೆ ಯಾವುದೇ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು

ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Also Read  ಸೆ.12ರಂದು ಕಡಬದಲ್ಲಿ ಡಿ.ಕೆ.ಶಿ ಬಂಧನದ ವಿರುದ್ಧ ಬೃಹತ್ ಪ್ರತಿಭಟನೆ ➤ತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಮನವಿ.

ತುಂಬೆ  ಡ್ಯಾಮ್ ಬಳಿ ಸವೆದು ಹೋಗಿರುವ ಪ್ರದೇಶಗಳಿಗೆ ಈಗಾಗಲೇ ಸರ್ಕಾರದಿಂದ ಪರಿಹಾರ ಮಂಜೂರು ಮಾಡಿದರೂ, ವಿತರಿಸಿಲ್ಲ.  ಸಂತ್ರಸ್ತರಿಗೆ ಈವರೆಗೆ ಪರಿಹಾರ ಮೊತ್ತ ಸಿಗದೆ ಪ್ರತಿ ದಿನ ಅಲೆಯುತ್ತಿದ್ದಾರೆ ಎಂದು ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತಿಳಿಸಿದರು. ಇನ್ನು ಎರಡು ದಿನಗಳಲ್ಲಿ  ಪರಿಹಾರ ಧನ ವಿತರಿಸಲು ಜಿಲ್ಲಾಧಿಕಾರಿಗಳು  ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ, ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್,  ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಮರಿಯಪ್ಪ, ಸೈಬರ್ ಕ್ರೈಂ ಡಿಎಸ್ಪಿ ಮಂಜುನಾಥ್, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ,  ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಭಂದಿಗಳು ಉಪಸ್ಥಿತರಿದ್ದರು.

error: Content is protected !!
Scroll to Top