(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.19. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇತ್ತೀಚೆಗೆ ಸುಬ್ರಹ್ಮಣ್ಯ ಪರಿಸರದಲ್ಲಿ ನಕ್ಸಲ್ ಚಲನವಲನ ಕಂಡು ಬಂದಿದ್ದರಿಂದ ಸುಬ್ರಹ್ಮಣ್ಯ ಸುತ್ತಮುತ್ತಲಿನ ದಟ್ಟಾರಣ್ಯದಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಶಿರಾಡಿ, ಅಡ್ಡಹೊಳೆ ಹಾಗೂ ಸುಳ್ಯ ಮಡಿಕೇರಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಂಡು ಬಂದ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಿರುವ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಲ್ಲದೆ ಕೇಂದ್ರದ ಎಸ್ಪಿಜಿ ಪೋಲೀಸ್ ಪಡೆ ಮತ್ತು ಪೋಲೀಸ್ ಅಧಿಕಾರಿಗಳ ತಂಡ ಕುಕ್ಕೆಗೆ ಆಗಮಿಸಿ ಮುಂಜಾಗ್ರತಾ ಕ್ರಮವಾಗಿ ಆದಿತ್ಯವಾರದಂದು ಪರಿಶೀಲನೆ ನಡೆಸಿತ್ತು. ಕೇಂದ್ರದ ಎಸ್ಪಿಜಿ ಪಡೆಯ ಅಧಿಕಾರಿ ಮತ್ತು ಹತ್ತು ಜನ ಪೋಲಿಸರ ತಂಡ, ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಸುಬ್ರಹ್ಮಣ್ಯ ಠಾಣಾಧಿಕಾರಿ ಗೋಪಾಲ್ ಹಾಗೂ ಸುಬ್ರಹ್ಮಣ್ಯ ಪೋಲೀಸರು ನವಶಕ್ತಿ ಸಮಾವೇಶ ನಡೆಯುವ ಕುಲ್ಕುಂದದ ವಿಷ್ಣುಮೂರ್ತಿ ಗದ್ದೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.