ಇಂದು ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಷಾ ಆಗಮನ ► ರಾಷ್ಟ್ರಾಧ್ಯಕ್ಷರ ಸ್ವಾಗತಕ್ಕೆ ಭರದಿಂದ ಸಿದ್ಧಗೊಂಡಿದೆ ಪುಣ್ಯಕ್ಷೇತ್ರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.19. ದಕ್ಷಿಣ ಭಾರತದ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ರಾತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದು, ಅಧ್ಯಕ್ಷರ ಸ್ವಾಗತಕ್ಕೆ ಕುಕ್ಕೆಯಲ್ಲಿ ಭರದ ಸಿದ್ಧತೆ ನಡೆಸಲಾಗಿದೆ.

ಕಳೆದ ಕೆಲವು ದಿನಗಳಿಂದ ಕಾರ್ಯಕರ್ತರು ಅಹರ್ನಿಶಿ ದುಡಿದು ನಗರಾಲಂಕಾರ ಮಾಡಿದ್ದಾರೆ. ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಕುಕ್ಕೆ ಕ್ಷೇತ್ರವು ಕೇಸರಿಮಯವಾಗಿದೆ. ಬಿಜೆಪಿ ಧ್ವಜ ಮತ್ತು ಬೃಹತ್ ಕಟೌಟ್ಗಳ ಮೂಲಕ ಸುಬ್ರಹ್ಮಣ್ಯವನ್ನು ಕಾರ್ಯಕರ್ತರು ಅಲಂಕಾರ ಮಾಡಿದ್ದಾರೆ. ಒಟ್ಟಾಗಿ ಅಮಿತ್ ಷಾ ಅವರ ಸ್ವಾಗತಕ್ಕೆ ಕಾರ್ಯಕರ್ತರು ಆತುರದಿಂದ ಸಜ್ಜಾಗಿದ್ದಾರೆ. ಅಲ್ಲದೆ ಅವರ ಆಗಮನಕ್ಕೆ ಸಮಯಗಣನೆ ಆರಂಭಗೊಂಡಿದೆ. ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇಂದು ರಾತ್ರಿ 9 ಗಂಟೆಗೆ ಆಗಮಿಸಿ ಶ್ರೀ ದೇವಳದ ಆದಿಶೇಷ ಗೆಸ್ಟ್‌ ಹೌಸ್ನಲ್ಲಿ ತಂಗಲಿದ್ದಾರೆ. ಫೆ.20 ರಂದು ಮುಂಜಾನೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಪೂಜೆ ನೆರವೇರಿಸಿ ಶ್ರೀ ದೇವರ ದರುಶನ ಪಡೆಯಲಿದ್ದಾರೆ. ಬಳಿಕ ಬೆಳಗ್ಗೆ 8.30 ಕ್ಕೆ ಕುಲ್ಕುಂದದ ಸಭಾಂಗಣದಲ್ಲಿ ನಡೆಯಲಿರುವ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಕೇವಲ ಒಂದು ಗಂಟೆ ನಡೆಯಲಿದ್ದು 9.30 ಕ್ಕೆ ಕ್ಷೇತ್ರದಿಂದ ತೆರಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ 228 ಬೂತ್ ನ ಒಂಬತ್ತು ಪ್ರಧಾನ ನವಶಕ್ತಿ ಕಾರ್ಯಕರ್ತರು ಅಪೇಕ್ಷಿತರಾಗಿ ಭಾಗವಹಿಸಲಿದ್ದಾರೆ. ಹೀಗಾಗಿ ಒಟ್ಟು 2052 ಪ್ರಮುಖ ನವಶಕ್ತಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲದೆ ಚುನಾಯಿತ ಜಿ.ಪಂ., ತಾ.ಪಂ., ಗ್ರಾ.ಪಂ ಸದಸ್ಯರುಗಳಾದ ಚುನಾಯಿತ ಜನಪ್ರತಿನಿಧಿಗಳು, ಸಹಕಾರಿ ಸಂಘದ ಪ್ರತಿನಿಧಿಗಳು, ಹಿರಿಯ ಕಾರ್ಯಕರ್ತರು ಸೇರಿದಂತೆ ಐದು ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಉಪಸ್ಥಿತರಿರುತ್ತಾರೆ. ಇವರೊಂದಿಗೆ ರಾಜ್ಯದ ನಾಯಕರು ಕೂಡಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಕುಲ್ಕುಂದದಿಂದ ಸುಬ್ರಹ್ಮಣ್ಯದ ತನಕ ಕೇಸರಿ ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ಇದರ ನಡುವಿನಲ್ಲಿ ಬಿಜೆಪಿ ಧ್ವಜ ಹಾಗೂ ಭಗವಾಧ್ವಜಗಳನ್ನು ಅಲಂಕರಿಸಲಾಗಿದೆ. ಅಲ್ಲದೆ ಬೃಹತ್ ಕಟೌಟ್ಗಳು ಮತ್ತು ಸ್ವಾಗತ ಫಲಕಗಳು ಅಲ್ಲಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಸ್ವಾಗತಿಸುತ್ತಿದೆ. ಇವುಗಳನ್ನು ಕಾರ್ಯಕರ್ತರು ಕಳೆದ ಹಲವಾರು ದಿನಗಳಿಂದ ಹಗಲಿರುಳು ದುಡಿದು ರಚಿಸಿದ್ದಾರೆ. ಒಟ್ಟಾರೆಯಾಗಿ ಕಾರ್ಯಕರ್ತರು ನವಶಕ್ತಿ ಸಮಾವೇಶದಲ್ಲಿ ಅಮಿತ್ ಷಾ ಅವರ ಮಾತುಗಳನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲದೆ ಪ್ರಪ್ರಥಮವಾಗಿ ಕ್ಷೇತ್ರಕ್ಕೆ ಆಗಮಿಸುವ ರಾಷ್ಟ್ರೀಯ ಅಧ್ಯಕ್ಷರನ್ನು ನೋಡುವ ತವಕ ಕಾರ್ಯಕರ್ತರಲ್ಲಿ ಇಮ್ಮಡಿಗೊಂಡಿದೆ. ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ನವಶಕ್ತಿ ಸಮಾವೇಶ ನಡೆಯಲಿದೆ. ಇಲ್ಲಿ ಬೃಹತ್ ವೇದಿಕೆಯನ್ನು ರಚಿಸಲಾಗಿದೆ.ಅಲ್ಲದೆ ಪ್ರದೇಶವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿ ವಿಶಾಲ ಮೈದಾನವನ್ನಾಗಿ ಪರಿವರ್ತಿಸಲಾಗಿದೆ. ಅಲ್ಲದೆ ಇಲ್ಲಿ ಕಾರ್ಯಕರ್ತರ ಉಪಹಾರ ವ್ಯವಸ್ಥೆಗೆ ಹಾಗೂ ಕುಳಿತುಕೊಳ್ಳಲು ಬೇಕಾದ ವ್ಯವಸ್ಥಿತ ಯೋಜನೆ ತಯಾರಿಸಲಾಗಿದೆ. ಸುಮಾರು 5000 ಕ್ಕೂ ಅಧಿಕ ಕಾರ್ಯಕರ್ತರು ಆಗಮಿಸುವುದರಿಂದ ಅವರಿಗೆ ಬೇಕಾದ ಅನುಕೂಲತೆಗಳನ್ನು ಸಿದ್ದಗೊಳಿಸಲಾಗಿದೆ. ಶಾಸಕ ಅಂಗಾರ ಕಳೆದ ಕೆಲವು ದಿನಗಳಿಂದ ಈ ಸ್ಥಳದಲ್ಲಿ ಮೊಕ್ಕಾಂ ಹೂಡಿ ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಕಾರ್ಯಕ್ರಮದ ನಿಮಿತ್ತ ಕಳೆದ ಕೆಲವು ದಿನಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದ 228 ಬೂತ್ಗಳಲ್ಲಿ ಸರಣಿ ಸಭೆಗಳನ್ನು ನಡೆಸಲಾಗಿದೆ. ಸುಬ್ರಹ್ಮಣ್ಯದಲ್ಲಿ ಐದಕ್ಕೂ ಅಧಿಕ ಬಾರಿ ಪ್ರಮುಖರ ಸಭೆಗಳು ನಡೆದಿದೆ. ಈ ಮೂಲಕ ಅಚ್ಚುಕಟ್ಟಾಗಿ ಸಮಾವೇಶವನ್ನು ಸಂಪನ್ನಗೊಳಿಸಲು ನಾಯಕರು ಮತ್ತು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ.

Also Read  ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಡಿವೈಎಸ್‌ಪಿ, ಎಸ್‌ಐ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top