ಇನ್ನೋವಾ ಕಾರಿನಲ್ಲಿ ಬಂದು ಸೋಲಾರ್ ಬ್ಯಾಟರಿಗಳನ್ನು ದೋಚುವ ಹೈಟೆಕ್ ಕಳ್ಳರು ► ಪೊಲೀಸರಿಗೆ‌ ತಲೆನೋವಾಗಿರುವ ಕಡಬ ಪರಿಸರದ ಸಣ್ಣಪುಟ್ಟ ಕಳ್ಳತನ ಪ್ರಕರಣ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಡೆಸುವ ಪುಡಿಗಳ್ಳರ ಕಾಟ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಸೋಲಾರ್ ಬ್ಯಾಟರಿಯನ್ನು ದೋಚುತ್ತಿರುವ ಹೈಟೆಕ್ ತಂಡವೊಂದು ಕಡಬ ಪರಿಸರದಲ್ಲಿ ಕಾರ್ಯಾಚರಿಸುತ್ತಿದೆ.

ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರಚಡವು, ಎರ್ಮಾಳ, ಕುಪ್ಲಾಜೆ, ಮಾಯಿಲ್ಗ ಸೇರಿದಂತೆ ಇನ್ನೆರಡು ಕಡೆಗಳಲ್ಲಿ ಹಾಗೂ ಕುಟ್ರುಪ್ಪಾಡಿ ಗ್ರಾಮದ ಪೆರ್ಲದಕೆರೆ ಎಂಬಲ್ಲಿ ಸರಕಾರದಿಂದ ಅಳವಡಿಸಲಾದ ಸೋಲಾರ್ ದೀಪದ ಬ್ಯಾಟರಿಗಳನ್ನು ಫೆಬ್ರವರಿ 16 ರಂದು ರಾತ್ರಿ ಕಳ್ಳರು ದೋಚಿದ್ದು, ಇನ್ನೋವಾ ವಾಹನದಲ್ಲಿ ಬಂದಂತಹ ಹೈಟೆಕ್ ಕಳ್ಳರ ತಂಡ ಈ ಕೃತ್ಯವೆಸಗಿದ್ದು, ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೋವಾ ಕಾರಿನಿಂದ ಇಳಿದುಬರುವ ನಾಲ್ವರು ಓರ್ವನ ಭುಜದ ಮೇಲೆ‌ ಇನ್ನೋರ್ವ ಹತ್ತಿ ಕ್ಷಣಮಾತ್ರದಲ್ಲಿ ಬ್ಯಾಟರಿಯನ್ನು ದೋಚುತ್ತಿರುವುದು ಸೆರೆಯಾಗಿದ್ದರೂ, ರಾತ್ರಿಯಾದುದರಿಂದ ಮುಖ ಪರಿಚಯ ಅಷ್ಟೇನೂ ಸರಿಯಾಗಿ ಗೋಚರಿಸುತ್ತಿಲ್ಲ. ಕಡಬ ಪರಿಸರದಲ್ಲಿ ಕಳೆದ ಕೆಲವು ಸಮಯಗಳಿಂದ ಸುಮಾರು 20 ಕ್ಕೂ ಹೆಚ್ಚು ಸೋಲಾರ್ ಬ್ಯಾಟರಿಗಳನ್ನು ಕಳವುಗೈಯಲಾಗಿದ್ದು, ಇದೇ ತಂಡದ ಕೃತ್ಯವಾಗಿರಬಹುದೆಂದು ಶಂಕಿಸಲಾಗಿದೆ. ಬಂದೋಬಸ್ತ್ ಅಥವಾ ಇನ್ನಿತರ ಕಾರಣಗಳಿಗಾಗಿ ಕಡಬ ಠಾಣೆಯಲ್ಲಿ ಪೊಲೀಸರ ಕೊರತೆ ಇರುವಾಗಲೇ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿರುವುದು ಪೊಲೀಸರಿಗೆ ನುಂಗಲಾರದ ತುತ್ತಾಗಿದೆ.

Also Read  ಬೈಕ್ ಸವಾರರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ದರೋಡೆ ➤ ಆರೋಪಿ ಮಂಗಳಮುಖಿ ಅರೆಸ್ಟ್

ಈ ಬಗ್ಗೆ ಪೆರಾಬೆ ಹಾಗೂ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನೀಡಿದ ದೂರಿನನ್ವಯ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top