ಗೋಳಿತ್ತಡಿ – ಏಣಿತ್ತಡ್ಕ ರಸ್ತೆ ಕಾಮಗಾರಿಯ ಅವ್ಯವಸ್ಥೆ ► ಸಾರ್ವಜನಿಕರಿಂದ ಪ್ರತಿಭಟನೆಗೆ ಸಿದ್ಧತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿಯಿಂದ ಕೊಯಿಲ ಗ್ರಾಮದ ಏಣಿತಡ್ಕಕ್ಕೆ ಸಾಗುವ ರಸ್ತೆಯಲ್ಲಿ ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು ಅಸಮರ್ಪಕ ನಿರ್ವಹಣೆಯಿಂದಾಗಿ ಸಾರ್ವಜನಿಕರು ದಿನಾ ಪರದಾಡುವಂತಾಗಿ ಅಕ್ರೋಶ ವ್ಯಕ್ತಪಡುತ್ತಿದ್ದಾರೆ.

ಕಳೆದ ಎರಡು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, ಜಲ್ಲಿ ಹಾಕಿ ವಾಹನ ಸಂಚಾರ ಸೇರಿದಂತೆ ರಸ್ತೆ ಬದಿಯಿಂದ ನಡೆದಾಡುವ ಜನತೆ ತಮ್ಮ ಜೀವ ಕ್ಯಯಲ್ಲಿ  ಹಿಡಿದು ಹೋಗುವಂತಾಗಿದೆ. ರಾಜ್ಯ ಸರಕಾರದ ಸುಮಾರು 49. ಲಕ್ಷ ರೂ ಅನುದಾದಲ್ಲಿ ಸುಮಾರು 1.47 ಕಿ.ಮೀ. ರಸ್ತೆ ಮರು ನಿರ್ಮಾಣವಾಗುತ್ತಿದ್ದು, ಕಳೆದ ಎರಡು ತಿಂಗಳಿಂದ ಧೂಳು ತಿನ್ನುತ್ತಾ ಓಡಾಡುವುದು ಒಂದಡೆಯಾದರೆ, ಹಾಕಿದ ಜಲ್ಲಿಯನ್ನು ಕ್ಲಪ್ತ ಸಮಯಕ್ಕೆ ರೋಲ್ ಮಾಡಿ ಸಮತಟ್ಟುಗೊಳಿಸದೆ ಇರುವುದರಿಂದ ಜಲ್ಲಿಕಲ್ಲುಗಳು ಎದ್ದು ಹೋಗಿ ರಸ್ತೆ ಬದಿಯ ತನಕ ಆವರಿಸಿಕೊಡು ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಘನವಾಹಗಳ ಓಡಾಟದಿಂದಾಗಿ ಜಲ್ಲಿಕಲ್ಲುಗಳು ಎದ್ದು ರಸ್ತೆಯಲ್ಲಿ ಸಣ್ಣಪುಟ್ಟ ವಾಹಗಳು ಹರಸಾಹಸ ಪಟ್ಟು ಓಡಾಡುವ ಪರಿಸ್ಥಿತಿ ಬಂದಿದೆ. ಇನ್ನು ದ್ವಿಚಕ್ರವಾಹನಗಳು ರಸ್ತೆ ಮಧ್ಯೆಯಲ್ಲಿ ಓಡಾಡುವ ಪರಿಸ್ಥಿತಿಯಲ್ಲಿಲ್ಲ. ರಸ್ತೆ ಬದಿಯಲ್ಲಾದರೂ ಓಡಾಡುವ ಎಂದು ಮುಂದಾದರೆ ಅಲ್ಲೆಲ್ಲಾ ಜಲ್ಲಿ ಕಲ್ಲುಗಳು ಹರಡಿ ಅಪಾಯವನ್ನು ತಂದೊಡ್ಡುತ್ತಿದೆ. ರಸ್ತೆಯಲ್ಲಿ ಬರುವ ನೆಲ್ಯೊಟ್ಟು ಎಂಬಲ್ಲಿ ಬೈಕ್ ಸವಾರರು ಅತ್ತದರಿ ಇತ್ತ ಪುಲಿ ಎನ್ನುವ ರೀತಿಯಲ್ಲಿ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Also Read  ಪುತ್ತೂರು ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ನಡುಮಜಲು ಶ್ರೀ ಮಹಾವಿಷ್ಣು ದೇವಸ್ಥಾನ

ರಸ್ತೆ ಬದಿಯಲ್ಲಿ ಸ್ವಲ್ಪ ಮಾತ್ರ ಜಾಗವಿದ್ದು, ಅದರಲ್ಲಿ ಕೂಡಾ ಜಲ್ಲಿಕಲ್ಲು ಹರಡಿದೆ. ಸ್ವಲ್ಪ ಯಾಮಾರಿದರು ಒಂದೋ ರಸ್ತೆಯಲ್ಲಿ ಹಾಕಿರುವ ಜಲ್ಲಿಯ ಮೇಲೆ ಬೀಳಬೇಕು ತಪ್ಪಿದರೆ ಇತ್ತ ಚರಂಡಿಗೆ ಬೀಳಬೇಕು. ಇಲ್ಲಿ ಅನೇಕ ಬೈಕ್ ಸವಾರರು ಜಾರಿಬಿದ್ದು ಕೆಟ್ಟ ಅನುಭವವನ್ನು ಪಡೆದಿದ್ದಾರೆ. ಗುರುವಾರದಂದು ಆಲಂಕಾರು ಸಿ.ಎ. ಬ್ಯಾಂಕಿನ ಉದ್ಯೋಗಿ ಸಂತೋಷ್ ರೈ ಎಂಬವರು ತನಗಾದ ಕೆಟ್ಟ ಅನುಭವದ ಹಿನ್ನೆಯಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿರುವವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮಗಾರಿಯ ವಿಳಂಬ ನೀತಿಗೆ ಅಕ್ರೋಶ ವ್ಯಕ್ತಪಡಿಸಿ ಇಲ್ಲಿ ಘನವಾಹನಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಅಗ್ರಹಿಸಿದರು. ಅದರಲ್ಲೂ ಮರಳು ಲಾರಿಗಳು ನಿರಂತರ ಓಡಾಟ ಮಾಡುವುದರಿಂದ ರಸ್ತೆಯ ಮಧ್ಯೆ ಇರುವ ಜಲ್ಲಿಗಳು ರಸ್ತೆ ಬದಿಗೆ ಬಿದ್ದು ಸಮಸ್ಯೆ ಮತ್ತಷ್ಟು ಹೆಚ್ಚಿದೆ. ತಕ್ಷಣ ಮರಳು ಲಾರಿಗಳ ಓಡಾಟವನ್ನು ಸ್ಥಗಿತಗೊಳಿಸಿ ಅವುಗಳಿಗೆ ರಸ್ತೆ ಕಾಮಗಾರಿ ಮುಗಿದ ಬಳಿಕ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಥಳೀಯ ಕೆಲವರು ಸಾಥ್ ನೀಡಿದ್ದಾರೆ. ಈ ಬಗ್ಗೆ ಕಾಮಗಾರಿ ನಡೆಸುವವರನ್ನು ವಿಚಾರಿಸಿದರೆ ಇಂಜೀನಿಯರ್ ಅವರು ಗಮ್ ಹಾಕದೆ ಜಲ್ಲಿ ಹಾಕಲು ಹೇಳಿದ್ದಾರೆ. ಇಲ್ಲದಿದ್ದರೆ ಜಲ್ಲಿ ಹೀಗೆ ಎದ್ದು ಹೋಗುತ್ತಿರಲಿಲ್ಲ ಎಂದು ಸಬೂಬು ನೀಡುತ್ತಾರೆ. ಇತ್ತ ರಸ್ತೆ ಸಂಬಂಧಪಟ್ಟ ಇಂಜಿನಿಯರ್ ಸಂದೀಪ್ ಅವರನ್ನು ಮಾತನಾಡಿಸಿದರೆ, ಅಲ್ಲಿನ ಜನ ಅಕ್ರಮವಾಗಿ ಸಾಗುವ ಮರಳುಲಾರಿಗಳ ಬಗ್ಗೆ ಮಾತನಾಡುತ್ತಿಲ್ಲ. ನಾವು ಜಲ್ಲಿ ಹಾಕಿದ ತಕ್ಷಣ ಅದರ ಮೇಲೆ ಮರಳು ಲಾರಿಗಳು ಯಾವುದೇ ಎಗ್ಗಿಲ್ಲದೆ ಓಡಾಡುತ್ತಿವೆ ಇದರಿಂದಾಗಿ ಸಮಸ್ಯೆ ತಲೆದೋರಿದೆ, ಇನ್ನು ಹದಿನೈದು ದಿನಳ ಒಳಗಾಗಿ ಡಾಮರೀಕರಣ ಕಾರ್ಯ ಮುಗಿಸಿ ಕೊಡುತ್ತೇವೆ ಎಂದು ಹೇಳುತ್ತಾರೆ.

Also Read  ಕಲ್ಲುಗುಡ್ಡೆ: ಫೆ. 14 ಮತ್ತು 15 ರಂದು ಹುಲಿಚಾಮುಂಡಿ ಹಾಗು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಎಲ್ಲರೂ ಜವಾಬ್ದಾರಿಯಿಂದ ನುಣುಚಿಕೊಂಡು ಸಾಮನ್ಯ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದರಿಂದ ಅಕ್ರೋಶಗೊಂಡಿರುವ ಸಾರ್ವಜನಿಕರು ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿದ್ದಾರೆ.

error: Content is protected !!
Scroll to Top