ಇಂದು ರಾಜ್ಯ ಸರಕಾರದ ಕೊನೆಯ ಬಜೆಟ್ ► ರೈತರ ಸಾಲ ಮನ್ನಾದತ್ತ ಸಿದ್ದರಾಮಯ್ಯ ಚಿತ್ತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.16. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊನೆಯ ಬಜೆಟನ್ನು ಶುಕ್ರವಾರ ಮಂಡಿಸಲಾಗುತ್ತಿದ್ದು, ರೈತರು, ಕೈಗಾರಿಕೋದ್ಯಮಿಗಳು, ಜನಸಾಮಾನ್ಯರಲ್ಲಿ ಹತ್ತು ಹಲವಾರು ನಿರೀಕ್ಷೆಗಳ ಹುಟ್ಟಿಕೊಂಡಿವೆ.

ಸದ್ಯದಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, 13ನೇ ಬಜೆಟ್‌ ಮಂಡಿಸಲಿರುವ ಸಿದ್ದರಾಮಯ್ಯ ಅವರಿಗೆ ಜನಪ್ರಿಯ ಯೋಜನೆಗಳ ಘೋಷಣೆ ಅನಿವಾರ್ಯವಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಭಾಗ್ಯಗಳ ಸರಣಿ ಮುಂದುವರಿಯಲಿದ್ದು “ಅಹಿಂದ’ ವರ್ಗದ ಸರ್ಕಾರ ಎಂಬ “ಹಣೆಪಟ್ಟಿ’ಯಿಂದ ಪಾರಾಗಲು ಅಹಿಂದ ಜತೆ ಇತರೆ ಸಮುದಾಯ ಸೆಳೆಯಲು ಭರಪೂರ ಘೋಷಣೆಗಳು ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಜಾತಿಗಳ ಓಲೈಕೆಗಾಗಿ ಸಮುದಾಯ ಭವನ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಜಮೀನು ಹಾಗೂ ಅನುದಾನ ಬಿಡುಗಡೆ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದನೆ ದೊರೆಯಲಿದೆ ಎಂದು ಹೇಳಲಾಗಿದೆ.

Also Read  ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ: ಸುಪ್ರೀಂ ಕೋರ್ಟ್

ಪ್ರಮುಖವಾಗಿ ಸಂಪೂರ್ಣ ಸಾಲ ಮನ್ನಾ ರೈತಾಪಿ ಸಮುದಾಯದ ಒಕ್ಕೊರಲ ಬೇಡಿಕೆಯಾಗಿದ್ದು, ಸಹಕಾರ ಸಂಘಗಳಲ್ಲಿ ರೈತರು ಮಾಡಿರುವ ಸಂಪೂರ್ಣ ಸಾಲ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲದಲ್ಲಿ ಸ್ವಲ್ಪ ಪ್ರಮಾಣವನ್ನಾದರೂ ಮಾಡಬೇಕು ಎಂಬ ಆಗ್ರಹ ಪ್ರಬಲವಾಗಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಧೈರ್ಯ ಮಾಡುತ್ತಾರಾ ಕಾದು ನೋಡಬೇಕಾಗಿದೆ. ಆದರೆ, ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಸಾಲದ ಪ್ರಮಾಣ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈಗಾಗಲೇ ಸಹಕಾರ ಸಂಘಗಳಲ್ಲಿ ರೈತರು ಮಾಡಿರುವ 50 ಸಾವಿರ ರೂ.ವರೆಗಿನ 8.165 ಕೋಟಿ ರೂ.ಮನ್ನಾ ಆಗಿದ್ದು, ಶೂನ್ಯ ಬಡ್ಡಿದರದ ಸಾಲದಲ್ಲಿ ಇನ್ನೂ 2600 ಕೋಟಿ ರೂ. ಬಾಕಿಯಿದೆ. ಅದನ್ನಾದರೂ ಮಾಡಿ ಎಂಬ ಮನವಿಯಿದೆ. ಜತೆಗೆ 28.73 ಲಕ್ಷ ರೈತರು ವಾಣಿಜ್ಯ ಬ್ಯಾಂಕುಗಳಲ್ಲಿ 42 ಸಾವಿರ ಕೋಟಿ ರೂ.ನಷ್ಟು ಸಾಲ ಪಡೆದಿದ್ದಾರೆ. ಒಟ್ಟಿನಲ್ಲಿ ಬಜೆಟ್ ಎಷ್ಟು ಜನೋಪಯೋಗಿಯಾಗಿರುತ್ತದೆ ಎನ್ನುವುದು ಮಂಡನೆಯ ನಂತರ ತಿಳಿದು ಬರಬೇಕಿದೆ.

Also Read  ಸುಬ್ರಹ್ಮಣ್ಯ ದೇಗುಲದ ಆಸ್ತಿಯ ರಕ್ಷಣೆ ಮಾಡುವಂತೆ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಶಿರಾಡಿ ಮನವಿ

error: Content is protected !!
Scroll to Top