(ನ್ಯೂಸ್ ಕಡಬ) newskadaba.com ಕಡಬ, ಫೆ.15. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ದೇಶದ ಗಡಿ ಕಾಯುವ ವೀರ ಯೋಧರು ಭಾರತೀಯರು ಎಂದು ಹೇಳಿಕೊಳ್ಳುವುದೇ ಒಂಥರಾ ಖುಷಿ. ಅವರು ನಮ್ಮ ರಾಜ್ಯದವರಾಗಿದ್ದರೆ ನಾವು ಹಮ್ಮೆ ಪಡುತ್ತೇವೆ. ಅಕಸ್ಮಾತ್ ನಮ್ಮ ಜಿಲ್ಲೆಯವರೇ ಆಗಿ ಬಿಟ್ಟರೆ ನಾವೇ ಭಯೋತ್ಪಾದಕರ ವಿರುದ್ಧ ಹೋರಾಡಿ ಗೆದ್ದಷ್ಟು ಸಂತಸ ಪಡುತ್ತೇವೆ. ಇಲ್ಲಿ ಆಗಿರುವುದೂ ಅದೇ.
ನಾಲ್ಕು ದಿನಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿರುವ ವೀರ ಯೋಧರ ಪೈಕಿ ನಮ್ಮ ತುಳುನಾಡಿನ ಯೋಧರೊಬ್ಬರು ಇದ್ದಾರೆ. ಅವರೇ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಕಡಬ ತಾಲೂಕಿನ ಆತೂರು ಸಮೀಪದ ಬಜತ್ತೂರು ಗ್ರಾಮದ ನೇರೆಂಕಿಯ ಮೇಲೂರು ನಿವಾಸಿ ಸಮೂನ್ ಬ್ಯಾರಿ ಹಾಗೂ ಆಮಿನಮ್ಮ ದಂಪತಿಯ ದ್ವಿತೀಯ ಪುತ್ರ ಜುಬೇರ್ ಎಂ. ನೇರಂಕಿ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆನೇರಂಕಿಯಲ್ಲಿ ಪಡೆದ ಇವರು ಪ್ರೌಢ ಶಿಕ್ಷಣವನ್ನು ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಮುಗಿಸಿದರು. ನಂತ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯು ಹಾಗೂ ಬಿ.ಬಿ.ಎಂ ವ್ಯಾಸಂಗವನ್ನು ಮುಗಿಸಿ ದೇಶಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡರು.
ಸಿ.ಆರ್.ಪಿ.ಎಫ್. ಯೋಧರಾಗಿರುವ ಇವರು ಮೂರು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕರಣ್ ನಗರಕ್ಕೆ ರಣ ಹೇಡಿಗಳಂತೆ ನುಗ್ಗಿದ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರನ್ನು ಅಟ್ಟಾಡಿಸಿ ಮುಲಾಜಿಲ್ಲದೇ ಹೊಡೆದುರುಳಿಸಿ ತನ್ನ ಹುದ್ದೆಗೆ ಗೌರವ ಸಲ್ಲಿಸಿದ್ದರು. ಕಟ್ಟಡವೊಂದರಲ್ಲಿ ಅವಿತು ಕುಳಿತು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಉಗ್ರರನ್ನು ಮಟ್ಟ ಹಾಕಿದ್ದರು. ಲಷ್ಕರ್ ಏ ತೊಯ್ಬಾ ಉಗ್ರಗಾಮಿ ಸಂಘಟನೆಯ ಕೆಲ ಕಿರಾತಕರು ನುಗ್ಗಿ ಅಲ್ಲಿದ್ದ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇಂತಹ ಸನ್ನಿವೇಶದಲ್ಲೂ ಅಪಾಯಕಾರಿ ಹಾಗೂ ಅನಿರೀಕ್ಷಿತ ದಾಳಿಯಿಂದ ಕಂಗೆಡದ ಭಾರತದ ಸಿ.ಆರ್.ಪಿ.ಎಫ್ ಯೋಧರು ಎಲ್ಲಾ ದಾಳಿಗಳನ್ನು ಎದುರಿಸಿ ನಿಂತು ತಕ್ಕ ಉತ್ತರ ನೀಡುವ ಮೂಲಕ ಭಯೋತ್ಪಾದಕರನ್ನು ಸದೆಬಡಿದಿದ್ದರು.
ಈ ಬಗ್ಗೆ ಝುಬೇರ್ ತನ್ನ ಫೇಸ್ ಬುಕ್ ವಾಲ್ ನಲ್ಲಿ ವೀಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು, ಅದು ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಝುಬೇರ್ ಬಗ್ಗೆ ಪ್ರಶಂಸೆಯ ಮಹಾಪೂರಗಳೇ ಹರಿದು ಬರುತ್ತಿವೆ. ಒಟ್ಟಿನಲ್ಲಿ ಭಯೋತ್ಪಾದಕರನ್ನು ಚಿಂದಿ ಉಡಾಯಿಸಿದ ಯೋಧರಲ್ಲಿ ಓರ್ವರು ನಮ್ಮ ಕರಾವಳಿಯವರು ಎಂಬುವುದೇ ಹೆಮ್ಮೆಯ ವಿಚಾರ.