(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.22. ಪೊಲೀಸರಿಗೆ ಧಮ್ಕಿ ಹಾಕಿದ ವಿಚಾರದಲ್ಲಿ ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿ ಹರೀಶ್ ಪೂಂಜಾ ಮನೆಗೆ ತೆರಳಿದ್ದ ಪೊಲೀಸರು ಬರಿಗೈಯಲ್ಲಿ ವಾಪಾಸ್ ಆಗಿದ್ದು, ಪರ – ವಿರೋಧ ಚರ್ಚೆಗೆ ಗ್ರಾಸವಾಗಿತ್ತು.
ಹರೀಶ್ ಪೂಂಜಾರ ಬಂಧನವಾದರೆ ನಾಳೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಂದ್ ಮಾಡುವುದಾಗಿ ಬಿಜೆಪಿ ಮುಖಂಡರು ಘೋಷಿಸಿರುವ ಮಧ್ಯೆಯೇ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪೊಲೀಸ್ ಇಲಾಖೆಯು, ಬೆಳ್ತಂಗಡಿ ವಿಧಾನಸಭಾ ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರೋಪಿತರಾದ ಹರೀಶ್ ಪೂಂಜರನ್ನು, ವಿಚಾರಣೆಗಾಗಿ ಠಾಣೆಗೆ ಕರೆತರಲು, ಬೆಳ್ತಂಗಡಿ ಠಾಣಾ ಪೊಲೀಸರು ಸದ್ರಿಯವರ ಮನೆಗೆ ತೆರಳಿರುತ್ತಾರೆ. ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳೀನ್ ಕುಮಾರ್ ಕಟೀಲ್ ರವರು, ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿಕೊಂಡಿರುತ್ತಾರೆ ಹಾಗೂ ಅದರಂತೆ ಸಂಸದರು ಆರೋಪಿತರಾದ ಹರೀಶ್ ಪೂಂಜಾರನ್ನು ಪೊಲೀಸರೊಂದಿಗೆ ಠಾಣೆಗೆ ಕಳುಹಿಸಿರುತ್ತಾರೆ. ಪ್ರಸ್ತುತ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜಾರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.