ಶತಮಾನೋತ್ಸವ ಸಂಭ್ರಮದಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ – ನಾಳೆ (ಎ.17) ನೂತನ ಪ್ರವೇಶ ದ್ವಾರದ ಉದ್ಘಾಟನೆ, ಕೃತಜ್ಞತಾ ಬಲಿಪೂಜೆ

ಕಡಬ: ಮಂಗಳೂರು ಧರ್ಮಪ್ರಾಂತದ ಆಧೀನದಲ್ಲಿರುವ ಕಡಬದ ಸೈಂಟ್ ಜೋಕಿಮ್ ಚರ್ಚ್ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿದ್ದು, ಎ. 17 ರಂದು ವಿವಿಧ ಧರ್ಮಪ್ರಾಂತಗಳ ಧರ್ಮಾಧ್ಯಕ್ಷರ ಉಪಸ್ಥಿತಿಯಲ್ಲಿ ಚರ್ಚ್‌ನ ನೂತನ ಪ್ರವೇಶ ದ್ವಾರದ ಉದ್ಘಾಟನೆ, ಶತಮಾನೋತ್ಸವ ಸಂಭ್ರಮದ ಸಭಾ ಕಾರ್ಯಕ್ರಮ ಹಾಗೂ ಕೃತಜ್ಞತಾ ಬಲಿಪೂಜೆ ನೆರವೇರಲಿದೆ.

ಬೆಳಗ್ಗೆ ಘಂಟೆ 9.30ಕ್ಕೆ ಧರ್ಮಾಧ್ಯಕ್ಷರಿಗೆ ಸ್ವಾಗತ, 9.40ಕ್ಕೆ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ ಆಶೀರ್ವಚನ, 10 ಘಂಟೆಗೆ ಕೃತಜ್ಞತಾ ಬಲಿಪೂಜೆ ನೆರವೇರಲಿದೆ. ಪೂರ್ವಾಹ್ನ 11.30 ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ ಅವರು ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ| ಡಾ| ಲಾರೆನ್ಸ್ ಮುಕ್ಕುಯಿ ಹಾಗೂ ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ|ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರು ಆಗಮಿಸಲಿದ್ದಾರೆ. ಪುತ್ತೂರು ವಲಯದ ಪಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್, ಪೊಲೀಸ್ ವರಿಷ್ಠಾಧಿಕಾರಿ ಸೈಮನ್ ಸಿ.ಎ., ಮಂಗಳೂರಿನ ಪ್ರೊವಿನ್ಶಿಯಲ್ ಸುಪೀರಿಯರ್ ವಂ| ಭಗಿನಿ ಸಿಸಿಲಿಯಾ ಬಿ.ಎಸ್. ಹಾಗೂ ಬೆಂಗಳೂರಿನ ಜೆಎಂಜೆ ಪ್ರೊವಿನ್ಶಿಯಲ್ ಸುಪೀರಿಯರ್ ವಂ| ಭಗಿನಿ ಅಂತೋನಿ ಮೇರಿ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ಗಂಟೆ 6.30 ರಿಂದ ಮನೋರಂಜನ ಕಾರ್ಯಕ್ರಮ ಜರಗಲಿದೆ ಎಂದು ಚರ್ಚ್‌ನ ಧರ್ಮಗುರು ವಂ|ಪಾವ್ಲ್ ಪ್ರಕಾಶ್ ಡಿ’ಸೋಜ ಅವರು ತಿಳಿಸಿದ್ದಾರೆ.

ಕಡಬ ಪರಿಸರದ ಕ್ರೈಸ್ತ ಮತಾನುಯಾಯಿಗಳಿಗೆ ಧಾರ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದ ಕಡಬ ಕೇಂದ್ರಿತ ಪ್ರಥಮ ಧರ್ಮಕೇಂದ್ರ ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ಕಡಬದ ಸೈಂಟ್ ಜೋಕಿಮ್ ಚರ್ಚ್ ಸ್ವಾತಂತ್ರ್ಯ ಪೂರ್ವ 1924ರಲ್ಲಿ ಸ್ಥಾಪನೆಗೊಂಡು ಶತಮಾನೋತ್ಸವದ ಸಂಭ್ರ್ರಮದಲ್ಲಿದೆ. ಆರಂಭದಲ್ಲಿ ಕಡಬ ಪರಿಸರದ ಕೈಸ್ತರು ತಮ್ಮ ಆಧ್ಯಾತ್ಮಿಕ ಪ್ರಾರ್ಥನೆಗಳಿಗಾಗಿ ದೂರದ ಕೊಕ್ಕಡದ ಚರ್ಚ್‌ನ್ನು ಆಶ್ರಯಿಸಿದ್ದರು. ಬಳಿಕ ಕೊಕ್ಕಡ ಚರ್ಚ್‌ನ ಧರ್ಮಗುರು ವಂ|ಆರ್.ಡಿ.ಸಿಕ್ವೇರಾ ಅವರು ಕಡಬದಲ್ಲಿ ಒಂದು ಚಾಪೆಲ್ ನಿರ್ಮಿಸಿ ವಾರಕ್ಕೊಮ್ಮೆ ಕಡಬಕ್ಕೆ ಆಗಮಿಸಿ ಪೂಜಾವಿಧಿಗಳನ್ನು ನಡೆಸುತ್ತಿದ್ದರು. 1922-24ರ ಕಾಲಘಟ್ಟದಲ್ಲಿ ಕಡಬದಲ್ಲಿ ಸುಮಾರು 150 ಕ್ರೈಸ್ತ ಕುಟುಂಬಗಳಿದ್ದವು ಎಂದು ದಾಖಲೆಗಳಲ್ಲಿ ಉಲ್ಲೇಖವಿದ್ದು, 1924 ಎ. 1 ರಂದು ವಂ|ಬಿಷಪ್ ಕಾರ್ಲೋ ಪಿರಿನಿ ಅವರು ವಂ|ಲೋರೆನ್ಸ್ ಲೋಬೋ ಅವರನ್ನು ಕಡಬದ ಪ್ರಥಮ ಧರ್ಮಗುರುವಾಗಿ ನೇಮಿಸುವ ಮೂಲಕ ನೆರೆಯ ಪಂಜ, ಕುಟ್ರುಪ್ಪಾಡಿ ಮುಂತಾದ ಪ್ರದೇಶಗಳ ಕ್ರೈಸ್ತ ವಿಶ್ವಾಸಿಗಳಿಗೆ ಧಾರ್ಮಿಕ ಕಾರ್ಯ ಹಾಗೂ ಪೂಜೆಗಳಲ್ಲಿ ಪಾಲ್ಗೊಳ್ಳುವ ಭಾಗ್ಯ ಲಭಿಸಿತು. 1924 ರಿಂದ 1957ರ ತನಕ ಕಡಬದಲ್ಲಿ ಸೇವೆ ಸಲ್ಲಿಸಿದ ವಂ|ಲೋರೆನ್ಸ್ ಲೋಬೋ ಅವರು ಬ್ರಿಟಿಷ್ ಆಡಳಿತದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸರಕಾರಿ ಕೆಲಸಗಳಲ್ಲಿ ಕ್ರೈಸ್ತರು ಮಾತ್ರವಲ್ಲದೇ ಇತರ ಧರ್ಮೀಯರಿಗೂ ಮುತುವರ್ಜಿಯಿಂದ ನೆರವು ನೀಡುತ್ತಾ ಜನಾನುರಾಗಿಯಾಗಿದ್ದರು. ಚರ್ಚ್ ವಠಾರದಲ್ಲಿ ಅವರು 1926ರಲ್ಲಿ ಆರಂಭಿಸಿದ ಶಾಲೆಯು ಕಡಬ ಪರಿಸರದಲ್ಲಿನ ಜನರಿಗೆ ಶೈಕ್ಷಣಿಕ ಅರಿವಿನ ಮೂಲವಾಯಿತು. ಇಬ್ಬರು ಶಿಕ್ಷಕರ ಜೊತೆಗೆ ತಾನೂ ತರಗತಿಗಳಲ್ಲಿ ಪಾಠ ಮಾಡುವುದರೊಂದಿಗೆ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳು ಉಳಿದುಕೊಳ್ಳಲು ಅವರು ಆರಂಭಿಸಿದ ಆಶ್ರಮ ಎಲ್ಲಾ ಜಾತಿ ಮತ್ತು ಧರ್ಮದ ಮಕ್ಕಳಿಗೆ ಆಶ್ರಯ ನೀಡಿತ್ತು. ಜನರ ವ್ಯಾಜ್ಯ, ತಕರಾರುಗಳನ್ನು ನ್ಯಾಯ ತೀರ್ಮಾನದ ಮೂಲಕ ಪರಿಹರಿಸಿಕೊಡುತ್ತಿದ್ದ ಅವರು ಕಡಬದಲ್ಲಿ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು. ಅವರ ನಿಧನದ 6 ತಿಂಗಳ ಕಾಲ ಪಂಜದ ಧರ್ಮಗುರುಗಳು ಜನರ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಡುತ್ತಿದ್ದರು. 1958ರಲ್ಲಿ ಕಡಬದಲ್ಲಿ ಹೊಸ ಚಾಪೆಲ್ ನಿರ್ಮಿಸಿದ ಧರ್ಮಗುರು ವಂ|ಬೇಸಿಲ್ ಡಿ’ಸೋಜ ಅವರು ಮುಂದೆ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾಗಿ ನಿಯುಕ್ತಿಗೊಂಡು ಸೇವೆ ಸಲ್ಲಿಸಿದರು. ಬಳಿಕ ಧರ್ಮಗುರುಗಳಾಗಿ ಆಗಮಿಸಿದ ವಂ|ಲಾರೆನ್ಸ್ ಗೋಮ್ಸ್ ಅವರು ಶಿಕ್ಷಣ ಮತ್ತು ಕೃಷಿಗೆ ಪ್ರಾಧಾನ್ಯತೆ ನೀಡಿದರು.

Also Read  ವಿದ್ಯುತ್ ಶಾಕ್ ತಗುಲಿ 11 ವರ್ಷದ ಬಾಲಕ ಮೃತ್ಯು.!

ಕೂಲಿಗಾಗಿ ಕಾಳು ಯೋಜನೆಯಡಿ ಬಾವಿ ತೋಡು ಮತ್ತು ಅಗಳು ನಿರ್ಮಿಸಲು ನೆರವು ನೀಡುವ ಮೂಲಕ ಸ್ಥಳೀಯ ಜನರ ಪ್ರೀತಿ ಗಳಿಸಿದರು. ಚರ್ಚ್ ವಠಾರದಲ್ಲಿದ್ದ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸಿದರು. ಅನಂತರ ಆಗಮಿಸಿದ ಧರ್ಮಗುರು ವಂ|ರೋಖಿ ಡಿ’ಸೋಜ ಅವರು ಚರ್ಚ್ ಮಾತ್ರವಲ್ಲದೇ ಊರಿನ ಜನರಿಗಾಗಿ ಹಾಲಿನ ಡೈರಿಯನ್ನು ಪ್ರಾರಂಭಿಸಿದರು.

Also Read  ಕರ್ನಾಟಕದಲ್ಲಿ ಮತ್ತೆ ಹೆಚ್ಚಳವಾದ ದಡಾರ ರೋಗ


2001ರಲ್ಲಿ ಧರ್ಮ ಗುರುಗಳಾಗಿ ವಂ|ಅಲೆಕ್ಸಾಂಡರ್ ಲೂವಿಸ್ ಅವರ ಆಗಮನ ಕಡಬದ ಚರ್ಚ್‌ನ ಮತ್ತು ಶಿಕ್ಷಣ ಸಂಸ್ಥೆಯ ಚಿತ್ರಣವನ್ನೇ ಬದಲಾಯಿಸಿತು. ಅವರು ಚರ್ಚ್‌ನ ಮೂಲಕ ಕನ್ನಡ ಮಾಧ್ಯಮ ಪ್ರೌಢಶಾಲೆ, ಪ.ಪೂ.ಕಾಲೇಜು, ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿ ಕಡಬದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು. ನೂತನ ಚರ್ಚ್ ಕಟ್ಟಡ, ವಾಣಿಜ್ಯ ಸಂಕೀರ್ಣ, ಗುರುಗಳ ವಸತಿಗೃಹ ಸೇರಿದಂತೆ ಹಲವು ಕೆಲಸಗಳನ್ನು ಪೂರ್ಣಗೊಳಿಸಿ ಹೊಸ ಇತಿಹಾಸವನ್ನು ಬರೆದರು. ಪ್ರಸ್ತುತ ಧರ್ಮಗುರುಗಳಾಗಿರುವ ವಂ|ಪಾವ್ಲ್ ಪ್ರಕಾಶ್ ಡಿ’ಸೋಜ ಧರ್ಮಕೇಂದ್ರಕ್ಕೆ ಸಮರ್ಥ ನೇತೃತ್ವನ್ನು ನೀಡಿ ಮುನ್ನಡೆಸುತ್ತಿದ್ದಾರೆ.

Also Read  ಮಾಡದ ತಪ್ಪಿಗೆ ದಲಿತ ಯುವ ಹೋರಾಟಗಾರನಿಗೆ ಶಿಕ್ಷೆ ➤ ಮನನೊಂದು ಆತ್ಮಹತ್ಯೆ ಗೆ ಯತ್ನ

error: Content is protected !!
Scroll to Top