ಕಾಂಗ್ರೆಸ್​ನ ಮಾಜಿ ಶಾಸಕ ವಾಸು ನಿಧನ

(ನ್ಯೂಸ್‌ ಕಡಬ) newskadaba ಮೈಸೂರು, ಮಾ.09: ಕಾಂಗ್ರೆಸ್​ನ ಮಾಜಿ ಶಾಸಕ ವಾಸು (72) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಾಸು ಅವರು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು.

ಇಂದು (ಮಾ.09) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರಿಗೆ ಮಕ್ಕಳಾದ ಕವೀಶ್​, ಅವೀಶ್​ ಹಾಗೂ ರಿತೇಷ್​ ಇದ್ದಾರೆ. ಗಾಯತ್ರಿಪುರಂ ವಾರ್ಡ್​​ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡು ನಂತರ ಮೇಯರ್​​ ಆಗಿ ಆಯ್ಕೆಗೊಂಡಿದ್ದರು. ಇದರಿಂದ ವಾಸು ಅವರು ಮೇಯರ್ ವಾಸು ಎಂದೇ ಪ್ರಖ್ಯಾತರಾಗಿದ್ದರು.

ಚಾಮರಾಜ ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರು ಬಾರಿ ಸೋಲು ಕಂಡು, 2013ರ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು. ಬಿಜೆಪಿಯ ಶಂಕರಲಿಂಗೇಗೌಡ ವಿರುದ್ಧ ಎರಡು ಬಾರಿ, ಬಿಜೆಪಿಯ ಎಲ್​. ನಾಗೇಂದ್ರ ವಿರುದ್ಧ ಒಂದು ಬಾರಿ ಸೋಲು ಕಂಡಿದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್​ ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.​

Also Read  ವೈದ್ಯಕೀಯ ವಿವಿ ಕ್ಯಾಂಪಸ್‌ನಲ್ಲಿ ವೈದ್ಯರು ಸೇರಿ ಐವರಿಗೆ ಕಚ್ಚಿದ ಬೀದಿನಾಯಿ

ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವಾಸು ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ವಾಸು ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ನನ್ನ ಆತ್ಮೀಯರಾಗಿದ್ದ ವಾಸು ಜೊತೆ ರಾಜಕೀಯ ಪಯಣದಲ್ಲಿ ಉತ್ತಮ ಒಡನಾಟ ಹೊಂದಿದ್ದೆ. ಮೈಸೂರು ಮೇಯರ್ ಆಗಿ, ನಂತರ ಶಾಸಕರಾಗಿ ವಾಸು ಅವರು ಮೈಸೂರು, ಚಾಮರಾಜನಗರ ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಗಲಿಕೆ ಪಕ್ಷಕ್ಕೆ ಬಹಳ ನಷ್ಟ ತಂದಿದೆ. ವಾಸು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.

error: Content is protected !!
Scroll to Top