ಕಡಬ: ಕಾಲೇಜು ಆವರಣದಲ್ಲಿ ಆ್ಯಸಿಡ್ ದಾಳಿ – ಮೂವರು ವಿದ್ಯಾರ್ಥಿನಿಯರು‌ –

ಕಡಬ, ಮಾ.04. ಕಾಲೇಜು ಆವರಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಯುವಕನೋರ್ವ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರದಂದು ಬೆಳಿಗ್ಗೆ ನಡೆದಿದೆ.

ಪ್ರಕರಣದ ಆರೋಪಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಎಂಬಿಎ ವಿದ್ಯಾರ್ಥಿ ಅಬೀನ್(23) ಎಂದು ಗುರುತಿಸಲಾಗಿದೆ. ಆರೋಪಿಯು ಸೋಮವಾರದಂದು ಕಡಬ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿ ಆಗಮಿಸಿದ್ದು, ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಇತರ ವಿದ್ಯಾರ್ಥಿಗಳೊಂದಿಗೆ ಜಗಲಿಯಲ್ಲಿ ಕುಳಿತಿದ್ದ ಎನ್ನಲಾಗಿದೆ. ಪರಿಸರದ ಇತರ ಕಾಲೇಜಿನಿಂದಲೂ ಈ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿದ್ದರಿಂದ ಈತನ ಬಗ್ಗೆ ಯಾರೂ ಅನುಮಾನ ಗೊಂಡಿರಲಿಲ್ಲ. ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪ್ರಶ್ನೆ ಪತ್ರಿಕೆಗಳ ಬಂಡಲನ್ನು ಕಛೇರಿಯಲ್ಲಿ ಬಿಚ್ಚುತ್ತಿದ್ದ ವೇಳೆ ವಿದ್ಯಾರ್ಥಿಗಳ ಚೀರಾಟ ಕೇಳಿ ಹೊರ ಬಂದಿದ್ದಾರೆ. ಅದಾಗಲೇ ಆರೋಪಿಯು ಆ್ಯಸಿಡ್ ಎರಚಿ ಪರಾರಿಯಾಗುತ್ತಿದ್ದ ವೇಳೆ ವಿದ್ಯಾರ್ಥಿಗಳು ಆತನನ್ನು ಬೆನ್ನಟ್ಟಿ ಹಿಡಿದು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಈ 8 ರಾಶಿಯವರಿಗೆ ಶುಭಫಲ, ಕಂಕಣಭಾಗ್ಯ ದಾಂಪತ್ಯದ ಸಮಸ್ಯೆ ವ್ಯಾಪಾರಾಭಿವೃದ್ಧಿ ಕಷ್ಟಗಳು ಪರಿಹರವಾಗುತ್ತದೆ

ಘಟನೆಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯ ಜೊತೆಗಿದ್ದ ಇತರ ಇಬ್ಬರು ವಿದ್ಯಾರ್ಥಿನಿಯರಿಗೂ ಆ್ಯಸಿಡ್ ತಗಲಿ ಸುಟ್ಟ ಗಾಯಗಳಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯು ಸಂತ್ರಸ್ತ ವಿದ್ಯಾರ್ಥಿನಿಯ ತಾಯಿಯ ಊರಾದ ಮಲಪ್ಪುರಂ ನಿವಾಸಿಯಾಗಿದ್ದು, ದೂರದ ಸಂಬಂಧಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸಂತ್ರಸ್ತ ಯುವತಿಯನ್ನು ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಪ್ರೀತಿ ನಿರಾಕರಿಸಿದ ಹಿನ್ನಲೆಯಲ್ಲಿ ಈ ಆ್ಯಸಿಡ್ ದಾಳಿ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪುತ್ತೂರು ಉಪವಿಭಾಗಾಧಿಕಾರಿ ಜೊಬಿನ್ ಮಹಾಪಾತ್ರ, ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್., ಕಡಬ ಎಸ್ಐ ಅಭಿನಂದನ್ ಎಂ.ಎಸ್. ಸ್ಥಳಕ್ಕೆ ಭೇಟಿಯಾದರು ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ವಿದ್ಯಾರ್ಥಿನಿಯ ಮೇಲೆ ಕೇರಳದ ಮಲಪ್ಪುರಂ ನಿವಾಸಿ ಅಬಿನ್ ಎಂಬಾತ ಆಸಿಡ್ ಎರಚಿದ್ದು, ಇದರಿಂದಾಗಿ ಆಕೆಯ ಜೊತೆಗಿದ್ದ ಸಹಪಾಠಿಗಳಾದ ಇತರ ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದು, ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇಲ್ನೋಟಕ್ಕೆ ಪ್ರೇಮ ನಿರಾಕರಣೆಯ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.
-ರಿಷ್ಯಂತ್ ಸಿ.ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

error: Content is protected !!
Scroll to Top