(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 01. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿಧಾನ ಜಾಗೃತಿ ಜಾಥಾದ ರಥವು ಶುಕ್ರವಾರದಮದು ಕಾರ್ ಸ್ಟ್ರೀಟ್ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿತು. ಈ ಸಂದರ್ಭದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಸಹಪ್ರಾಧ್ಯಾಪಕ ಹಾಗೂ ಪ್ರಭಾರ ಪ್ರಾಂಶುಪಾಲ ಡಾ. ನವೀನ್ ಕೊಣಾಜೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಂವಿಧಾನದ ಪೀಠಿಕೆಯ ಭಾಗವನ್ನು ಪ್ರತಿಜ್ಞಾ ರೂಪದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಿದರು.
ಸಂವಿಧಾನ ಜಾಥಾದ ತೇರಿನ ಉಸ್ತುವಾರಿ ಗಿರೀಶ್ ನಾವಡ ಅವರು ಮಾತನಾಡಿ, ಸಂವಿಧಾನದಿಂದಾಗಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳು ಪ್ರಭುಗಳಾಗಬೇಕು. ಈ ನಿಟ್ಟಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸುವ ಸಂದರ್ಭದಲ್ಲಿ ಇನ್ನೊಬ್ಬರ ಹಕ್ಕಿಗೆ ಧಕ್ಕೆಯಾಗದ ರೀತಿಯಲ್ಲಿ ಹಕ್ಕನ್ನು ಚಲಾಯಿಸುವ ಶಕ್ತಿಯನ್ನು ನೀಡಿದ್ದು ಸಂವಿಧಾನ. ಇದು ಸುದೀರ್ಘವಾಗಿ ರಾಷ್ಟ್ರವನ್ನು ಸಮೃದ್ಧಿಗೊಳಿಸಬೇಕು ಎಂಬುದನ್ನು ನಮಗೆ ತಿಳಿಸಿಕೊಟ್ಟಿದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ನಾಗಪ್ಪ ಗೌಡ, ರಸಾಯನಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ಸುಧಾಕರನ್ ಟಿ, ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಜೆಫ್ರಿ ರೋಡ್ರಿಗಸ್, ಗ್ರಂಥಪಾಲಕಿ ಉಮಾ ಎ.ಬಿ., ಸಮಾಜಕಾರ್ಯ ವಿಭಾಗದ ನಿತಿನ್ ಚೋಳ್ವೇಕರ್, ಕಛೇರಿ ಅಧೀಕ್ಷಕ ರಮೇಶ್, ಕಾಲೇಜಿನ ಪ್ರಾಧ್ಯಾಪಕರುಗಳು, ಉಪನ್ಯಾಸಕರುಗಳು, ಬೋಧಕೇತರ ಸಿಬ್ಬಂದಿಗಳು, ಕಾಲೇಜು ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದ್ವಿತೀಯ ಬಿ.ಎ ವಿದ್ಯಾರ್ಥಿಗಳಿಂದ ನಾಡಗೀತೆ, ರಾಷ್ಟ್ರ ನಮನ ಹಾಗೂ ಜಾಥಾದ ಸದಸ್ಯರಿಂದ ಕಿರು ಪ್ರಹಸನ ಕಾರ್ಯಕ್ರಮವು ನಡೆಯಿತು.