ಬದುಕಿನ ಪ್ರತೀ ಹಂತದಲ್ಲೂ ಪ್ರಶ್ನೆ ಮಾಡುವುದನ್ನು ಕಲಿಯಿರಿ

(ನ್ಯೂಸ್ ಕಡಬ) newskadaba.com  ಮಂಗಳೂರು, ಮಾ. 01. ಸಮಾಜದಲ್ಲಿರುವ ಮೌಢ್ಯತೆಯ ಮನೋಭಾವವನ್ನು ತೊರೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಬದುಕಿನ ಪ್ರತಿ ಹಂತದಲ್ಲೂ ಪ್ರಶ್ನೆ ಮಾಡುವುದನ್ನು ಕಲಿತುಕೊಳ್ಳಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷ, ಖ್ಯಾತ ಮನೋವೈದ್ಯ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿ. ಆರ್. ಚಂದ್ರಶೇಖರ್ ಹೇಳಿದರು. ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಕನ್ನಡ ಹಾಗೂ ಕೊಡಗು ಗ್ರಂಥಪಾಲಕರ ಸಂಘ, ಉಡುಪಿ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು, ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ- 2024 ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಜೀವನ ಪ್ರಗತಿ ಹೊಂದಲು ವಿಜ್ಞಾನದ ಪಾತ್ರ ಬಹಳ ಮುಖ್ಯವಾದುದು. ನಿತ್ಯ ಜೀವನದಲ್ಲಿ ಪ್ರಶ್ನಿಸುವ ಪ್ರವೃತ್ತಿಯ ಜೊತೆಗೆ ವಿಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಅನ್ವೇಷಣೆಗಳ ಹಾದಿಯಲ್ಲಿ ನಡೆಯಬಹುದು. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಭಾವನೆ ಕುರಿತು ಹಿಡಿತವಿರಬೇಕು. ಮನುಷ್ಯನ ದೇಹದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಲ್ಲಿ ವಿಜ್ಞಾನ ಹುದುಗಿಕೊಂಡಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ, ಯುವ ಪೀಳಿಗೆ ವೈಜ್ಞಾನಿಕ ಮನೋಧರ್ಮದ ಹಿನ್ನಲೆಯಲ್ಲಿ ವಿಚಾರ ಮಂಥನ ನಡೆಸಿ ಅರ್ಥೈಸಿಕೊಂಡು ಮುನ್ನಡೆಯಬೇಕು. ವಿದ್ಯಾರ್ಥಿಗಳು ವಿಜ್ಞಾನದ ಮೂಲಸತ್ವ ಅರಿತು ವಿಜ್ಞಾನ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡುವಂತಾಗಬೇಕು ಎಂದು ಆಶಿಸಿದರು. ಪ್ರತಿ ಶಿಕ್ಷಣ ಸಂಸ್ಥೆಗಳಲ್ಲೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಹೆಚ್ಚು ಜ್ಞಾನ ತಿಳಿಯುವಂತೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ವಿಚಾರಗಳ ಬಗ್ಗೆ ತಿಳುವಳಿಕೆ ಇರಬೇಕು ಎಂದು ಕಾಲೇಜಿನ ವಿಜ್ಞಾನ ಸಂಘದ ಸಂಯೋಜಕ ಪ್ರೊ.ಜಗನ್ನಾಥ್ ಎನ್. ಪ್ರಾಸ್ತಾವಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶಾಧಿಕಾರಿ ಡಾ. ಸಿದ್ಧರಾಜು ಎಂ. ಎನ್., ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಕು. ನಂದಾ ಪಾಯಸ್, ಡಿಕೆಕೆಎಲ್‍ಎನ್ ಅಧ್ಯಕ್ಷ ಡಾ. ವಾಸಪ್ಪ ಗೌಡ, ಕೆಜೆವಿಎಎಸ್ ಸಂಚಾಲಕ ಮುಹಮ್ಮದ್ ಬ್ಯಾರಿ ಬೊಳ್ಳಾಯಿ ಉಪಸ್ಥಿತರಿದ್ದರು.

Also Read  ವಿರೇಂದ್ರ ಹೆಗ್ಗಡೆ ವಿರುದ್ದ ಆಧಾರ ರಹಿತ ಆರೋಪಕ್ಕೆ ನಿರ್ಬಂಧ

error: Content is protected !!
Scroll to Top