ಯುವನಿಧಿ ಯೋಜನೆ- ಪ್ರತೀ ತಿಂಗಳು ಸ್ವಯಂ ಘೋಷಣೆ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 29. ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಪ್ರತೀ ತಿಂಗಳು ಸ್ವಯಂ ಘೋಷಣೆ ಮಾಡಬೇಕು. ಯುವನಿಧಿ ಯೋಜನೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾಗಳನ್ನು 2023ರ ವರ್ಷದಲ್ಲಿ ತೇರ್ಗಡೆ ಹೊಂದಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೋರ್ಟಲ್‍ ನಲ್ಲಿ ನೋಂದಣಿಯಾಗಿದ್ದು ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024ರಂದು ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಈ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ತಿಂಗಳು 25ನೇ ತಾರೀಖಿನೊಳಗೆ ತಾನು ನಿರುದ್ಯೋಗಿ ಎಂದು ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆಯನ್ನು ಮಾಡಬೇಕಾಗಿರುತ್ತದೆ.

Also Read  ಖಾಸಗಿ ಶಾಲೆಗಳ ದುಬಾರಿ ಶುಲ್ಕ ಖಂಡಿಸಿ ► ತನ್ವೀರ್ ಸೇಠ್ ನಿವಾಸದ ಮೇಲೆ ಕರವೇ ಯುವ ಸೇನೆಯಿಂದ ಮುತ್ತಿಗೆ

ಪ್ರಸಕ್ತ ತಿಂಗಳಲ್ಲಿ ಫೆಬ್ರವರಿ 29ರವರೆಗೆ ಸೇವಾ ಸಿಂಧು ಪೋರ್ಟಲ್‍ನಲ್ಲಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಪ್ರಯೋಜನ ಪಡೆಯುತ್ತಿರುವ ಅರ್ಹ ಅಭ್ಯರ್ಥಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆಯನ್ನು ಮಾಡಲಾಗುವುದಿಲ್ಲ. ಈಗಾಗಲೇ ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಜನವರಿ 2024ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿದ್ದು, ಮುಂದಿನ ತಿಂಗಳು ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿರುವ ಕುರಿತು ಎಸ್.ಎಂ.ಎಸ್ ಸಂದೇಶವನ್ನು ರವಾನಿಸಲಾಗಿರುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡ್ ಆಗಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಹಾಗೂ ಅಭ್ಯರ್ಥಿಗಳು ಸ್ವಯಂ ಘೋಷಣೆ ಮಾಡಿಕೊಳ್ಳಲು https://sevasindhugs.karnataka.gov.in ವೆಬ್‍ಸೈಟ್ ವೀಕ್ಷಿಸಬಹುದು ಎಂದು ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಂತ್ರಿಗಳೊಂದಿಗೆ ಗ್ರಾಮಸ್ಥರ ಸಂವಾದ ➤ ಶಾಸಕ ಎಸ್. ಅಂಗಾರ, ಉಸ್ತುವಾರಿ ಸಚಿವರು ಭಾಗಿ

error: Content is protected !!
Scroll to Top