(ನ್ಯೂಸ್ ಕಡಬ) newskadaba.com ಕಡಬ, ಫೆ.14. ಮಹಾಶಿವರಾತ್ರಿ ಪ್ರಯುಕ್ತ ಕುಕ್ಕೇ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನಕ್ಕೆ ಆಗಮಿಸಿದ್ದ ದೂರದೂರಿನ ಭಕ್ತರು ಹಿಂತಿರುಗಿ ಹೋಗಲು ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲ್ವೇ ನಿಲ್ದಾಣಕ್ಕೆ ಆಗಮಿಸಿದಾಗ ನೂಕು ನುಗ್ಗಲು ಉಂಟಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಟಿಕೆಟ್ ನೀಡಲು ಒಂದೇ ಕೌಂಟರ್ ಇದ್ದುದರಿಂದ ಪ್ರಯಾಣಿಕರು ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದು, ಇದ್ದ ಓರ್ವ ರೈಲ್ವೇ ಪೊಲೀಸ್ ಸಿಬ್ಬಂದಿಯನ್ನು ಜನರು ತಳ್ಳಿ ಹಾಕಿ ನೂಕುನುಗ್ಗಲು ನಡೆಸಿದ್ದರಿಂದ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸುದ್ದಿ ತಿಳಿದು ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಕರಿಸಿದರು. ಶಿವರಾತ್ರಿ ಸಮಯದಲ್ಲಿ ಪ್ರತಿವರ್ಷ ಇಂತಹದೇ ಪರಿಸ್ಥಿತಿ ಎದುರಾಗುತ್ತಿದ್ದರೂ ರೈಲ್ವೇ ಇಲಾಖೆ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.