ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ರಾಜ್ಯದಲ್ಲಿರುವ ಕ್ರೈಸ್ತರು ► ಬಜೆಟ್ ನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅತ್ಯಗತ್ಯ: ಎ.ಸಿ.ಜಯರಾಜ್ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಫೆ.14. ರಾಜ್ಯದಲ್ಲಿ ಕ್ರೈಸ್ತರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್‌ನ ಅಧ್ಯಕ್ಷ, ನ್ಯಾಯವಾದಿ ಎ.ಸಿ.ಜಯರಾಜ್ ಅವರು ಆಗ್ರಹಿಸಿದ್ದಾರೆ.

ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಸರಕಾರವು ಕ್ರೈಸ್ತರ ಅಭಿವೃದ್ಧಿ ಸಮಿತಿಯನ್ನು ಸ್ಥಾಪಿಸಿದ್ದು, 175 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಸಮಿತಿಯು ಕೇವಲ ಶಿಫಾರಸು ಮಾಡುವ ಅಧಿಕಾರವನ್ನು ಮಾತ್ರ ಹೊಂದಿರುವುದರಿಂದ ಸಮುದಾಯಕ್ಕೆ ಹೆಚ್ಚಿನ ಅನುಕೂಲತೆ ಸಿಗುತ್ತಿಲ್ಲ. ಕೇವಲ ಚರ್ಚುಗಳ ದುರಸ್ತಿ, ಕ್ರಿಶ್ಚಿಯನ್ ಸಮುದಾಯ ಭವನ ನಿರ್ಮಾಣ, ಚರ್ಚುಗಳಿಗೆ ಆವರಣ ಗೋಡೆ ರಚನೆ, ಸ್ಮಶಾನ ನಿರ್ಮಾಣ ಮುಂತಾದ ಕೆಲಸಗಳಿಗೆ ಮಾತ್ರ ಸಮಿತಿಯ ಚಟುವಟಿಕೆಗಳು ಸೀಮಿತವಾಗಿದ್ದು, ಸಮುದಾಯದಲ್ಲಿರುವ ಬಡ ಕ್ರೈಸ್ತರ ಆರ್ಥಿಕ ಕಲ್ಯಾಣ ಕಾರ್ಯಕ್ರಮಗಳಿಗೋಸ್ಕರ ಯಾವುದೇ ಸವಲತ್ತುಗಳು ಇರುವುದಿಲ್ಲ. ರಾಜ್ಯದಲ್ಲಿ  12 ಲಕ್ಷ ಮಲಯಾಳಿ ಕ್ರೈಸ್ತರು, 10 ಲಕ್ಷ ತಮಿಳು ಕ್ರೈಸ್ತರು, 8 ಲಕ್ಷ ತೆಲುಗು ಕ್ರೈಸ್ತರು, 10 ಲಕ್ಷದಷ್ಟು ಕೊಂಕಣಿ ಮತ್ತು ಕನ್ನಡ ಕ್ರೈಸ್ತರು ಸೇರಿ ಒಟ್ಟು 40 ಲಕ್ಷದಷ್ಟು ಕ್ರೈಸ್ತರಿದ್ದಾರೆ. ಆದರೆ ಸರಕಾರವು 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಕೇವಲ 11.47 ಲಕ್ಷ  ಕ್ರೈಸ್ತರಿದ್ದಾರೆ ಎಂದು ಘೋಷಿಸಿದೆ. ಆದುದರಿಂದ ರಾಜ್ಯದಲ್ಲಿರುವ ಕ್ರೈಸ್ತರು ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು.

Also Read  ಆಯುಷ್ಮಾನ್ ಭಾರತ್ ಯೋಜನೆ- ಬಿ.ಪಿ.ಎಲ್. ಕಾರ್ಡ್‍ದಾರರಿಗೆ  5 ಲಕ್ಷದ ವರೆಗೆ ಉಚಿತ ಚಿಕಿತ್ಸೆ

ರಾಜ್ಯದಲ್ಲಿ ಸರಕಾರವು ಅಲ್ಪಸಂಖ್ಕಾರ ಅಭಿವೃದ್ಧಿ ನಿಗಮದಲ್ಲಿ 2750 ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ. ಆದರೆ ಅದು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸಿಗುತ್ತಿರುವುದರಿಂದ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಆದುದರಿಂದ ಕ್ರೈಸ್ತರ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪಿಸುವುದೊಂದೇ ಸೂಕ್ತ ಪರಿಹಾರವಾಗಿದೆ. ಆದುದರಿಂದ ರಾಜ್ಯದ ಮುಖ್ಯಮಂತ್ರಿಯವರು ತಮ್ಮ ಬಜೆಟ್‌ನಲ್ಲಿ ನಿಗಮ ಸ್ಥಾಪಿಸುವ ಘೋಷಣೆ ಮಾಡುವುದರೊಂದಿಗೆ ಕನಿಷ್ಠ 750 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಎ.ಸಿ.ಜಯರಾಜ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ  ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್‌ನ ಕಡಬ ತಾಲೂಕು ಉಪಾಧ್ಯಕ್ಷ ಸೈಮನ್ ಸಿ.ಜೆ., ಪ್ರಧಾನ ಕಾರ್ಯದರ್ಶಿ ಯೋಹನ್ನಾನ್ ಲಾಲೂ, ಸಂಘಟನಾ ಕಾರ್ಯದರ್ಶಿ ಕ್ಸೇವಿಯರ್ ಬೇಬಿ, ಕೋಶಾಧಿಕಾರಿ ಸಜಿ ಒ.ಕೆ. ಉರುಂಬಿಲ್ ಅವರು ಉಪಸ್ಥಿತರಿದ್ದರು.

Also Read  ಕಾಪು: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ➤ ವ್ಯಕ್ತಿ ಮೃತ್ಯು

error: Content is protected !!
Scroll to Top