ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಅಭಿವೃದ್ಧಿಗೆ ಶಂಕುಸ್ಥಾಪನೆ; ನರೇಂದ್ರ ಮೋದಿಯಿಂದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ- ಭಾಗೀರಥಿ ಮುರುಳ್ಯ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 27. ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ನೋಡಿ ವಿದೇಶಗಳಲ್ಲೂ ಭಾರತೀಯರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಲಾಗುತ್ತದೆ. ಕಟ್ಟಡ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಯೋಚಿಸಿ ನರೇಂದ್ರ ಮೋದಿ ಅಭಿವೃದ್ಧಿ ಯೋಜನೆ ರೂಪಿಸಿ ಆಡಳಿತ ನಡೆಸುತ್ತಿದ್ದಾರೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಅಮೃತ ಭಾರತ್ ರೈಲು ನಿಲ್ದಾಣ ಯೋಜನೆಯಡಿ ನೆಟ್ಡಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ನಡೆಯುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಭಾ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇನ್ನೇನು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ 50 ವರ್ಷ ತುಂಬಲಿದೆ. ಈ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಸಮಗ್ರ ಮೂಲಭೂತ ವ್ಯವಸ್ಥೆಗಳೊಂದಿಗೆ ಅಭಿವೃದ್ಧಿ ಕೆಲಸ ಪೂರ್ಣಗೊಳ್ಳಬೇಕಿದೆ. ಇಲ್ಲಿನ ರೈಲು ನಿಲ್ದಾಣದ ಬೇಡಿಕೆಗಳು ಅಮೃತ ಭಾರತ ರೈಲು ನಿಲ್ದಾಣ ಯೋಜನೆಯ ಅನುದಾನದಲ್ಲಿ ಈಡೇರಲಿದೆ. ಮುಂದೆಯೂ ಇಲ್ಲಿನ ಬೇಡಿಕೆಗಳ ಬಗ್ಗೆ ಸಂಬಂಧಿಸಿದವರಲ್ಲಿ ಮನವಿ ಮಾಡಿ ಪರಿಹಾರ ದೊರಕಿಸಿ ಕೊಡಲಾಗುವುದು ಎಂದು ಭರವಸೆ ನೀಡಿದ ಅವರು ರೈಲ್ವೇ ಉದ್ಯೋಗಕ್ಕೆ ನಮ್ಮ ಭಾಗದ ಅಭ್ಯರ್ಥಿಗಳು ನೇಮಕೊಂಡಲ್ಲಿ ಈ ಭಾಗಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು. ಸುಳ್ಯ ಬಿಜೆಪಿ ಮಂಡಲದ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಲ್ಲಾ ವಿಭಾಗಗಳಲ್ಲೂ ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ನಮಗೆಲ್ಲ ಹರ್ಷದಾಯಕ ಎಂದ ಅವರು ರೈಲ್ವೇ ಇಲಾಖೆಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಎಂದರು.

Also Read  ನ.19ರಂದು ಯಕ್ಷಗಾನ ಅಕಾಡೆಮಿ ವತಿಯಿಂದ ವಿವಿಧ ಪ್ರಶಸ್ತಿ ಪ್ರದಾನ

ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ದಿನೇಶ್ ಮಾತನಾಡಿ, ಈ ಭಾಗದಲ್ಲಿ ಇನ್ನೂ ಹಳಿ ದಾಟಿ ಸಾಗಬೇಕಾದ ರಸ್ತೆಗಳಿಗೆ ಇಂತಹ ಕಡೆಗಳಲ್ಲಿ ಸೇತುವೆ ನಿರ್ಮಿಸಬೇಕಿದೆ ಎಂದ ಅವರು ಇಲ್ಲಿ ನಿಲ್ದಾಣದಲ್ಲಿ ಸ್ವಚ್ಚತೆ, ಪಾರ್ಕಿಂಗ್ ಗೆ ಪೂರಕ ವ್ಯವಸ್ಥೆ ಆಗಬೇಕಿದೆ. ಇಲ್ಲಿನ ರೈಲು ನಿಲ್ದಾಣ ಅಭಿವೃದ್ಧಿಗೆ ಅನುದಾನ ನೀಡಿದ ಕೇಂದ್ರದ ನರೇಂದ್ರ ಮೋದಿಗೆ ಅಭಿನಂದನೆಗಳು ಎಂದರು. ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಕಡಬ ಸಮೀಪದ ಕೋಡಿಂಬಾಳ ರೈಲು ನಿಲ್ದಾಣವನ್ನೂ ಅಭಿವೃದ್ಧಿ ಪಡಿಸಿದಲ್ಲಿ ಇಲ್ಲಿನ ದಟ್ಟಣೆ ನಿವಾರಣೆಯಾಗಲಿದೆ. ಅಲ್ಲದೇ ಕಡಬ ಭಾಗದ ಜನತೆಗೂ ಪ್ರಯೋಜನ ಆಗಲಿದೆ ಎಂದ ಅವರು ಈ ನಿಟ್ಟಿನಲ್ಲಿ ಇಲಾಖೆ ಗಮನಹರಿಸಬೇಕು ಎಂದರು. ಜಿ.ಪಂ. ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್, ಹರೀಶ್ ಕಂಜಿಪಿಲಿ, ತಾ.ಪಂ. ಮಾಜಿ ಸದಸ್ಯ ಫಝಲ್ ಕೋಡಿಂಬಾಳ, ರೈಲ್ವೇ ಇಲಾಖೆಯ ರಾಘವೇಂದ್ರ, ನೆಟ್ಟಣ ರೈಲು ಬಳಕೆದಾರರ ಸಂಘದ ಅಧ್ಯಕ್ಷ ಕೆ.ಜಿ.ಪ್ರಸಾದ್ ನೆಟ್ಟಣ, ರೋಯಿ ಅಬ್ರಾಹಂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೈಲ್ವೇ ಇಲಾಖೆಯ ಸುರೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆರಂಭದಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Also Read  ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!

ಮೋದಿಯಿಂದ ಶಂಕುಸ್ಥಾಪನೆ;

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಅಭಿವೃದ್ಧಿಗೊಳ್ಳಲಿರುವ ಕಡಬ ತಾಲೂಕಿನ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ, ಬಜಕೆರೆ ರೈಲು ನಿಲ್ದಾಣ ಸಮೀಪ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ದೇಶದ ವಿವಿಧ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ರೈಲು ನಿಲ್ದಾಣಗಳಲ್ಲಿ ಎಲ್‌ ಇಡಿ ಪರದೆ ಮೂಲಕ ವಿಡಿಯೋ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

error: Content is protected !!
Scroll to Top