(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ. 24. ಸಾಲದ ಕಂತು ಪಾವತಿಸದ ಹಿನ್ನೆಲೆ ಧರ್ಮಸ್ಥಳ ಸಂಘದವರು ಮನೆಗೆ ಬಂದು ಗಲಾಟೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶೃಂಗೇರಿ ಪಟ್ಟಣದ ಹನುಮಂತ ನಗರದ ನಿವಾಸಿ ಅರ್ಪಿತಾ(29) ಎಂದು ಗುರುತಿಸಲಾಗಿದೆ.
ಮೃತ ಅರ್ಪಿತಾರವರು, ಕಳೆದ 6 ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ 1 ಲಕ್ಷ ರೂ. ಸಾಲ ಪಡೆದಿದ್ದು, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದ ಕಾರಣ ಸಂಘದ ಸದಸ್ಯರು ಶುಕ್ರವಾರದಂದು ಅರ್ಪಿತಾ ಮನೆಗೆ ತೆರಳಿ ಸಾಲದ ವಿಚಾರವಾಗಿ ಗಲಾಟೆ ಮಾಡಿದ್ದಾರೆ. ಬಳಿಕ ಎರಡೂ ಕಡೆಯವರಿಂದ ವಾಗ್ವಾದ ನಡೆದಿದ್ದು, ಅರ್ಪಿತಾ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಿಂದನೆಯಿಂದ ಮನನೊಂದ ಅರ್ಪಿತಾ ಮನೆಯಲ್ಲಿ ತನ್ನ ಮಗುವಿನೊಂದಿಗೆ ಒಬ್ಬರೇ ಇದ್ದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.