ಮಧ್ಯಾಹ್ನದ ಕಿರು ನಿದ್ರೆಯ ಲಾಭಗಳು – ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಫೆ. 24. ಜೀವಜಗತ್ತಿನ ಸಸ್ತನಿಗಳಲ್ಲಿ ಸುಮಾರು 85 ಶೇಕಡಾ ಪ್ರಾಣಿ ಸಂಕುಲಗಳು “ಪಾಲಿಫೇಸಿಕ್ ನಿದ್ರಾ ಜೀವಿಗಳು” ಎಂದರೆ ದಿನದಲ್ಲಿ ಹಲವು ಬಾರಿ ಸಣ್ಣ ಸಣ್ಣ ಕಿರುನಿದ್ರೆ ಮಾಡುತ್ತದೆ. ಆದರೆ ಮನುಷ್ಯ ಮಾತ್ರ ಅಲ್ಪ ಸಂಖ್ಯಾತ “ಮೋನೋಘೇಸಿಕ್ ನಿದ್ರಾ ಜೀವಿ” ಅಂದರೆ ನಮ್ಮ ದಿನದಲ್ಲಿ ಹಗಲು ಹೊತ್ತು ಕೆಲಸ ಮಾಡಿ ರಾತ್ರಿ ಹೊತ್ತು ಚೆನ್ನಾಗಿ ನಿದ್ರಿಸುತ್ತೇವೆ. ಹಗಲು ರಾತ್ರಿ ಎಂದು ಸರಿಯಾಗಿ ವಿಂಗಡಣೆಯಾದಂತೆ, ರಾತ್ರಿ ನಿದ್ದೆ, ಹಗಲು ಕೆಲಸ ಎಂದು ಮನುಷ್ಯರು ತಮ್ಮ ಜೀವನ ಶೈಲಿಯನ್ನು ಒಗ್ಗಿಸಿಕೊಂಡಿದ್ದಾರೆ. ಆದರೆ ಸಣ್ಣ ಮಕ್ಕಳು ಮತ್ತು ವೃದ್ದಾಪ್ಯದಲ್ಲಿ ವೃದ್ದರು ಹಗಲು ಹೊತ್ತು ಸಣ್ಣ ಸಣ್ಣ ಕಿರುನಿದ್ದೆ ಮಾಡುವುದು ಸಹಜವೇ. ಸಣ್ಣ ಮಕ್ಕಳು ನಿದ್ರೆಯಲ್ಲಿಯೇ ಬೆಳೆಯುತ್ತಾರೆ ಎಂದು ನಮ್ಮ ಹಿರಿಯರು  ಹೇಳುವುದನ್ನು ನಾವು ಹಲವಾರು ಬಾರಿ ಕೇಳಿ ತಿಳಿದುಕೊಂಡಿದ್ದೇವೆ. ಅದೇನೇ ಇರಲಿ ನಿದ್ರೆ ಎನ್ನುವುದು ದಣಿದ ದೇಹಕ್ಕೆ ಮತ್ತು ಒತ್ತಡದಿಂದ ಬಳಲಿದ ಮನಸ್ಸಿನ ವಿಶ್ರಾಂತಿಗೆ ಅತೀ ಆವಶ್ಯಕ. ಒಬ್ಬ ಮನುಷ್ಯನಿಗೆ ದಿನದ 24 ಗಂಟೆಗಳಲ್ಲಿ ರಾತ್ರಿಯ ಹೊತ್ತು 6 ರಿಂದ 8 ಗಂಟೆಗಳ ನಿದ್ರೆ ಅತೀ ಅವಶ್ಯಕ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಅದೇ ರೀತಿ ಮಧ್ಯಾಹ್ನದ ಹೊತ್ತು ಒಂದರ್ಧ ಘಂಟೆಗಳ ನಿದ್ರೆ ಕೂಡಾ ದಣಿದ ದೇಹಕ್ಕೆ ಅತೀ ಅಗತ್ಯ ಎಂದೂ ಸಾಬೀತಾಗಿದೆ. ಬೆಳಗ್ಗೆ ಬೇಗನೆ ಎದ್ದು ಕೆಲಸ ಆರಂಭಿಸಿ ದೈಹಿಕವಾಗಿ ಬಳಲಿದ ದೇಹಕ್ಕೆ ಮಧ್ಯಾಹ್ನದ ಊಟದ ಬಳಿಕ 20 ನಿಮಿಷಗಳ ಕಾಲದ ವಿಶ್ರಾಂತಿ ದಣಿದ ದೇಹಕ್ಕೆ ಮತ್ತಷ್ಟು ಹುರುಪು ಮತ್ತು ಹುಮ್ಮಸ್ಸು ನೀಡುತ್ತದೆ ಎಂದು ಚರಿತ್ರೆಯಿಂದ ತಿಳಿದು ಬಂದಿದೆ.

Also Read  ಆ. 20 ರಂದು ಡಿ. ದೇವರಾಜ ಅರಸು 109ನೇ ಜನ್ಮದಿನಾಚರಣೆ

ಏನೇನು ಲಾಭಗಳಿವೆ?

೧.       ವ್ಯಕ್ತಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

೨.       ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

೩.       ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

೪.       ನರಮಂಡಲ ಮತ್ತು ಸ್ನಾಯುಗಳಿಗೆ ವಿಶ್ರಾಂತಿ ನೀಡಿ ಕಾರ್ಯಕ್ಷಮತೆ ಹೆಚ್ಚಿಸುತ್ತದೆ

೫.       ಹೃದಯದ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ

೬.       ದೇಹದ ಜೀವಕೋಶಗಳಿಗೆ ಹೊಸ ಚೈತನ್ಯ ತುಂಬಿ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ.

೭.       ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಧ್ಯಾಹ್ನದ ಊಟದ ಬಳಿಕ  20ರಿಂದ 30 ನಿಮಿಷಗಳ ನಿದ್ರೆಯ ವ್ಯಕ್ತಿಯಲ್ಲಿ ಚುರುಕುತನವನ್ನು ಮತ್ತು ಕೆಲಸದ ಕೌಶಲ್ಯವನ್ನು ಹೆಚ್ಚಿಸುತ್ತದೆ ಈ ಮೂಲಕ ವ್ಯಕ್ತಿಯ ಕೆಲಸದ ಕಾರ್ಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಮಧ್ಯಾಹ್ನದ ಕಿರುನಿದ್ರೆಯಿಂದ ವ್ಯಕ್ತಿಯ ಅಲಸ್ಯ ಕಡಿಮೆಯಾಗಿ ಜ್ಞಾಪಕ ಶಕ್ತಿ ವ್ಯದ್ಧಿಯಾಗುತ್ತದೆ. ಮಧ್ಯಾಹ್ನದ ಕಿರುನಿದ್ರೆ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ ಮತ್ತು ಹೆಚ್ಚಿನ ರಕ್ತದೊತ್ತಡ ನಿಯಂತ್ರಣಕ್ಕಾಗಿ ಸೇವಿಸುವ ಔಷಧಿಗಳ ಪ್ರಮಾಣವನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಎಂದು ವೈದ್ಯಕೀಯ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಅಧಿಕ ರಕ್ತದೊತ್ತಡದಿಂದಾಗಿ ಇತರ ಪ್ರಮುಖ ಅಂಗಗಳಿಗೆ ಉಂಟಾಗುವ ಹಾನಿಯನ್ನು ಕಡಿಮೆಗೊಳಿಸುತ್ತದೆ ಎಂದು ಸಾಬೀತಾಗಿದೆ.

ಮಾನಸಿಕ ಒತ್ತಡದ ಸಮಯದಲ್ಲಿ ಎಡ್ರೆನಲಿನ್ ಮತ್ತು ನಾರ್ ಎಡ್ರೆನಲಿನ್ ಎಂಬ ರಸದೂತದಲ್ಲಿ ಏರುಪೇರು ಉಂಟಾಗುತ್ತದೆ. ಈ ರಸದೂತಗಳನ್ನು ಸರಿಯಾದ ಪ್ರಮಾಣದಲ್ಲಿ ಇರುವಂತೆ ಮಾಡುವ ಸಾಮರ್ಥ್ಯ ಮಧ್ಯಾಹ್ನದ ಕಿರುನಿದ್ರೆಗೆ ಇದೆ. ಈ ರಸದೂತಗಳ ಪ್ರಮಾಣ ಜಾಸ್ತಿಯಾದಲ್ಲಿ ರಕ್ತದೊತ್ತಡ ಜಾಸ್ತಿಯಾಗಿ, ಹೃದಯದ ಬಡಿತ ಹೆಚ್ಚಾಗಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ನರಮಂಡಲದ ನರಗಳಿಗೆ ಮತ್ತು ಸ್ನಾಯುಗಳಿಗೆ ಕೂಡಾ ಹಗಲು ಹೊತ್ತು ವಿಶ್ರಾಂತಿಯ ಅಗತ್ಯ ಇರುತ್ತದೆ. ವಿಪರೀತ ಕೆಲಸದ ಒತ್ತಡದಿಂದ ಮಾನಸಿಕ ಒತ್ತಡ ಜಾಸ್ತಿಯಾದಾಗ ಮೆದುಳಿನಿಂದ ಒಂದಷ್ಟು ರಾಸಾಯನಿಕಗಳು  ರಕ್ತಕ್ಕೆ ಬಿಡುಗಡೆಯಾಗುತ್ತದೆ. ಈ ನ್ಯೂರೋ ಟಾಕ್ಸಿನ್‌ಗಳು ದೇಹದ ಜೀವಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಧ್ಯಾಹ್ನದ ಕಿರುನಿದ್ರೆಯಿಂದ ಈ ನ್ಯೂರೋಟಾಕ್ಸಿನ್‌ಗಳ ಮಟ್ಟ ಕಡಿಮೆಯಾಗಿ ನರಗಳಿಗೆ ಮತ್ತು ಸ್ನಾಯುಗಳಿಗೆ ಅಗತ್ಯ ಮುಕ್ತಿ ಸಿಗುತ್ತದೆ.

Also Read  ಆಗಸ್ಟ್ 25ರಿಂದ ಸೆಪ್ಟೆಂಬರ್ 1ರ ವರೆಗೆ ರಾಷ್ಟ್ರೀಯ ನೇತ್ರದಾನ ಜಾಗ್ರತಿ ಪಾಕ್ಷಿಕ; ಕಣ್ಣು ಮಣ್ಣಾಗದಿರಲಿ - ಮುರಲೀ ಮೋಹನ ಚೂಂತಾರು

ಅಮೇರಿಕಾದ ಬಾಹ್ಯಕಾಶ ಸಂಸ್ಥೆ ಪೈಲಟ್‌ಗಳ ಮೇಲೆ ನಡೆಸಿದ ಸಂಶೋದನೆಯ ಮುಖಾಂತರ 40 ನಿಮಿಷಗಳ ಮಧ್ಯಾಹ್ನದ ನಿದ್ರೆ ಬಾಹ್ಯಕಾಶಯಾತ್ರಿಗಳು ಮತ್ತು ಪೈಲಟ್‌ ಗಳ ಕಾರ್ಯದಕ್ಷತೆಯನ್ನು 35 ಶೇಕಡಾದಷ್ಟು ಹೆಚ್ಚಿಸುತ್ತದೆ ಮತ್ತು ಅವರನ್ನು ಸದಾಕಾಲ ಎಚ್ಚರಿಕೆಯಲ್ಲಿ ಇರುವಂತೆ ಪ್ರಚೋದಿಸುತ್ತದೆ ಎಂದು ತಿಳಿದುಬಂದಿದೆ. ಮಾನಸಿಕವಾಗಿ ಕೂಡಾ ಮಧ್ಯಾಹ್ನದ ಕಿರುನಿದ್ರೆ ವ್ಯಕ್ತಿಗೆ ಉಲ್ಲಾಸ, ನವಚೈತನ್ಯ ತರುತ್ತದೆ ಮತ್ತು ಅಲಸ್ಯತನವನ್ನು ಹೊಡೆದೋಡಿಸುತ್ತದೆ. ಅದೇ ರೀತಿ ವಾಹನ ಚಾಲಕರಿಗೂ ಮಧ್ಯಾಹ್ನದ 20 ನಿಮಿಷಗಳ ನಿದ್ರೆ ಅತೀ ಅವಶ್ಯಕ ಎಂದೂ ಸಾಬೀತಾಗಿದೆ.

ಕೊನೆಮಾತು- ದಣಿವು, ಆಯಾಸ ಎನ್ನುವುದು ಜೀವಜಗತ್ತಿನ ಎಲ್ಲಾ ಪ್ರಾಣಿ ಸಂಕುಲ ಮತ್ತು ಮನುಷ್ಯರಿಗೂ ಸಮಾನವಾಗಿ ಅನ್ವಯಿಸುತ್ತದೆ. ದಣಿದ ಮತ್ತು ಮನಸ್ಸು ಸದಾಕಾಲ ವಿಶ್ರಾಂತಿಯನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ದೇಹ ಹಗಲು ಹೊತ್ತಿನ 20ರಿಂದ 40 ನಿಮಿಷಗಳ ವಿಶ್ರಾಂತಿ, ದಣಿದ ದೇಹಕ್ಕೆ ಅಮೃತ ಸಿಂಚನ ನೀಡುತ್ತದೆ ಎಂದು ಸಾಬಿತಾಗಿದೆ. ಆದರೆ ಇಳಿ ಸಂಜೆಯ ಹೊತ್ತು ನಿದ್ದೆ ಮಾಡುವುದು, ಗಂಟೆ ಗಟ್ಟಲೆ ಮಧ್ಯಾಹ್ನ ನಿದ್ದೆ ಮಾಡುವುದರಿಂದ ರಾತ್ರಿ ನಿದ್ದೆ ಬಾರದೆ ಮತ್ತಷ್ಟು ತೊಂದರೆಗಳಿಗೆ ಮುನ್ನುಡಿ ಬರೆಯಬಹುದು. ವಿನ್‌ ಸ್ಟೆನ್ ಚರ್ಚಿಲ್, ಜಾನ್ ಕೆನಡಿ, ರೋನಾಡ್ಡ್ ರೇಗನ್, ನೆಪೋಲಿಯನ್, ಆಲ್ಪರ್ಟ್ ಇನ್‌ಸ್ಟೆನ್, ಥೋಮಸ್ ಆಲ್ವಾ ಎಡಿಸನ್, ಜಾರ್ಜು ಬುಷ್ ಮುಂತಾದ ಘಟಾನುಘಟಿಗಳ ಕೂಡಾ ಮಧ್ಯಾಹ್ನದ ಕಿರು ನಿದ್ರೆಯ ಪ್ರತಿಪಾದಕರು ಎಂದು ಚರಿತ್ರೆಯಿಂದ ತಿಳಿದು ಬಂದಿದೆ. ಅದೇನೇ ಇರಲಿ ಹಗಲು ನಿದ್ರೆಯಿಂದ ವ್ಯಕ್ತಿಯ ಆರೋಗ್ಯ ವೃದ್ಧಿಸಿದರೆ ಮನುಷ್ಯಕುಲಕ್ಕೆ ಇದಕ್ಕಿಂತ ಹೆಚ್ಚಿನ ಲಾಭ ಇನ್ನೊಂದಿಲ್ಲ ಎಂದರೂ ತಪ್ಪಾಗಲಾರದು.

Also Read  ಸೆಪ್ಟೆಂಬರ್ 25- ವಿಶ್ವ ಫಾರ್ಮಸಿಸ್ಟರ ದಿನ- ಡಾ.ಚೂಂತಾರು

ಡಾ|| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top