(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 23. ನಲ್ವತ್ತು ಸೈನಿಕರನ್ನು ಬಲಿತೆಗೆದುಕೊಂಡ ಪುಲ್ವಾಮ ದುರಂತದ ಬಗ್ಗೆ ಸತ್ಯ ಹೇಳಿರುವುದೇ ಬಿಜೆಪಿ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸತ್ಯಪಾಲ್ ಮಲಿಕ್ ಅವರಿಗೆ ಅಪರಾಧವಾಗಿ ಹೋಯಿತು. ನಿರೀಕ್ಷೆಯಂತೆ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿ, ಬೆದರಿಸುವ ಪ್ರಯತ್ನ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪುಲ್ವಾಮ ದುರಂತ ನಡೆದ ಸಂದರ್ಭ ಸತ್ಯಪಾಲ್ ಅವರು ಜಮ್ಮು- ಕಾಶ್ಮೀರದ ರಾಜ್ಯಪಾಲರಾಗಿದ್ದ ಕಾರಣ ಕೇಂದ್ರದ ವಿರುದ್ಧದ ಅವರ ಆರೋಪವನ್ನು ತಳ್ಳಿಹಾಕಲಾಗದು. ಸತ್ಯವನ್ನು ಎದುರಿಸಲಾಗದ ಕೇಂದ್ರ ಸರಕಾರ ನಿರೀಕ್ಷೆಯಂತೆ ಅವರಿಗೆ ಸಿಬಿಐ ತನಿಖೆಯ ಮೂಲಕ ಚಿತ್ರಹಿಂಸೆ ನೀಡಲು ಹೊರಟಿದೆ, ಈ ಕೃತ್ಯ ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.