ಕಡಬ: ಮನೆಗೆ ಬಂದು ಅನೈತಿಕ ಪೊಲೀಸ್ ಗಿರಿ – ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಫೆ.23.‌ ಠಾಣಾ ವ್ಯಾಪ್ತಿಯ ಮರ್ಧಾಳ ಎಂಬಲ್ಲಿ ಗುರುವಾರದಂದು ಅನೈತಿಕ ಪೊಲೀಸ್ ಗಿರಿ ಪ್ರಕರಣವೊಂದು ಕಂಡುಬಂದಿದ್ದು, ನಾಲ್ವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ: ಮರ್ಧಾಳ ಶಿವಾಜಿನಗರ ನಿವಾಸಿ ದಿ. ಇಲ್ಯಾಸ್ ಎಂಬವರ ಪುತ್ರ ಫಯಾಜ್ ಎಂಬಾತ ಗುರುವಾರ ಸಂಜೆ ತನ್ನ ತಾಯಿ ಮತ್ತು ಸಹೋದರರೊಂದಿಗೆ ತನ್ನ ಮನೆಯಲ್ಲಿದ್ದ ಸಂದರ್ಭದಲ್ಲಿ ಸುಮಾರು 7 ಗಂಟೆಯ ವೇಳೆಗ ಮನೆಯ ಹತ್ತಿರಕ್ಕೆ ಅಪರಿಚಿತ ಮಹಿಳೆಯೊಬ್ಬಳು ಚಿಕ್ಕ ಮಗುವನ್ನು ಎತ್ತಿಕೊಂಡು ಬಂದಿದ್ದು, ರಿಯಾಝ್ ನ ಮನೆ ಯಾವುದು ಎಂದು ಕೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಇದು ರಿಯಾಝ್ ನ ಮನೆ ಅಲ್ಲ. ನೀವು ಇಲ್ಲಿಂದ ತೆರಳಿ ಎಂದು ಹೇಳಿದ್ದು, ಆ ಸಮಯದಲ್ಲಿ ಅಪರಿಚಿತ ಮಹಿಳೆಯು ಅಲ್ಲೇ ಮನೆ ಮುಂಭಾಗದಲ್ಲಿ ಅಳುತ್ತಾ ನಿಂತಿದ್ದರು ಎನ್ನಲಾಗಿದೆ. ಆ ಸಂದರ್ಭದಲ್ಲಿ ಫಯಾಝ್ ನ ತಾಯಿ ಅಪರಿಚಿತ ಮಹಿಳೆಯನ್ನು ಸಮಾಧಾನ ಮಾಡಿ ನಂತರ ಮನೆ ಪಕ್ಕದ ಇಬ್ರಾಹಿಂ ಎಂಬ ಹುಡುಗನ ಜೊತೆ ಈ ಮಹಿಳೆಯನ್ನು ಮರ್ಧಾಳ ಬಸ್ಸು ನಿಲ್ದಾಣದ ಹತ್ತಿರ ಬಿಟ್ಟು ಬಾ ಎಂದು ಹೇಳಿದಂತೆ ಆ ಹೆಂಗಸನ್ನು ಸ್ಕೂಟರ್‌ನಲ್ಲಿ ಇಬ್ರಾಹಿಂ ಎಂಬಾತನು ಕುಳ್ಳಿರಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಅದೇ ಸಮಯಕ್ಕೆ ಆರೋಪಿಗಳಾದ ಜಿನಿತ್‌ ಕುಮಾರ್, ಉಮೇಶ್, ವಿನುತ್‌, ನಾಗೇಶ್ ಹಾಗೂ ಶ್ರೀಕರ ಸೇರಿದಂತೆ ಇತರ 10 ರಿಂದ 15 ಜನರು ಬಂದು ಫಯಾಝ್ ನನ್ನು ಕರೆದು ಸ್ಕೂಟರ್‌ನಲ್ಲಿ ಹೋದ ಮಹಿಳೆಯ ಬಗ್ಗೆ ವಿಚಾರಿಸಿದ್ದು, ಈ ವೇಳೆ ನೀಡಿದ ಉತ್ತರದಿಂದ ಅಸಾಮಾಧಾನಿತರಾದ ತಂಡ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ ಹಿಂದೂ ಮಹಿಳೆಯರನ್ನು ಮನೆಗೆ ಬರಮಾಡಿಕೊಂಡು ಅನೈತಿಕವಾಗಿ ಅವರನ್ನು ಹಾಳು ಮಾಡುತ್ತಿದ್ದೀಯಾ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಫಯಾಝ್ ನ ತಾಯಿ ಸಫಿಯಾ ಅಡ್ಡ ಬಂದಿದ್ದು, ಅವರಿಗೂ ಹಲ್ಲೆ‌ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಫಯಾಝ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Also Read  ಗ್ರಾಮೀಣ ರಸ್ತೆಗಳ ತ್ವರಿತ ದುರಸ್ತಿ: ಸಚಿವ ಕೋಟ ಸೂಚನೆ 

error: Content is protected !!
Scroll to Top