(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 22. ಯಾವುದೇ ವ್ಯಕ್ತಿ ಗೌರವ ಡಾಕ್ಟರೇಟ್ ಪಡೆದಿದ್ದರೂ ಅವರು ತಮ್ಮ ಹೆಸರಿನ ಮುಂದೆ ‘ಡಾ.’ ಎಂದು ಹಾಕಿಕೊಳ್ಳುವಂತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ವಿಧಾನ ಸಭೆ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಗೌರವ ಡಾಕ್ಟರೇಟ್ ಕೊಡುವುದಕ್ಕೂ ನಿಯಮ ಇದೆ. ಗೌರವ ಡಾಕ್ಟರೇಟ್ ಪಡೆದವರು ಹೆಸರಿನ ಮೊದಲು ‘ಡಾ.’ ಎಂದು ಹಾಕಿಕೊಳ್ಳುವಂತಿಲ್ಲ. ಈ ಬಗ್ಗೆ ಸುಪ್ರಿಂ ಕೋರ್ಟ್ ಆದೇಶವೇ ಇದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಯಾವ್ಯಾವುದೋ ವಿಶ್ವ ವಿದ್ಯಾಲಯಗಳು ಡಾಕ್ಟರೇಟ್ ಪದವಿಗೆ ಅರ್ಹರಲ್ಲದವರಿಗೂ ಪದವಿಗಳನ್ನು ನೀಡುತ್ತಿವೆ. ಇದರಿಂದಾಗಿ ಗೌರವ ಡಾಕ್ಟರೇಟ್ ನೀಡಲು ಸರ್ಕಾರಿ, ಖಾಸಗಿ ವಿವಿಗಳಿಗೆ ಏಕರೂಪ ನಿಯಮ ಜಾರಿಗೆ ತರಲಾಗುವುದು. ಈ ಕುರಿತಂತೆ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಮೂಲಕ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ನಿಯಮ ರೂಪಿಸುತ್ತೇವೆ. ಖಾಸಗಿ ಸೇರಿದಂತೆ ಎಲ್ಲ ವಿವಿಗೆ ಏಕರೂಪ ನಿಯಮ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.