ಸರ್ವಜ್ಞ ವಚನಗಳಿಂದ ಸಮಾಜದಲ್ಲಿ ನೈತಿಕತೆ ನಿರ್ಮಾಣ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 22. ಸಮಾಜದ ಅಂಕುಡೊಂಕು ಮೂಢನಂಬಿಕೆಗಳನ್ನು ಜನರಿಗೆ ಸರಳವಾಗಿ ತಮ್ಮ ವಚನಗಳ ಮೂಲಕ ತಿಳಿಸಿದ ಕವಿ ಸರ್ವಜ್ಞರ ವಚನಗಳನ್ನು ಶಾಲಾ ಮಕ್ಕಳಿಗೆ ತಿಳಿಸುವ ಮೂಲಕ ನೈತಿಕ ಸಮಾಜವನ್ನು ಕಟ್ಟುವ ಕೆಲಸ ಆಗಬೇಕಾಗಿದೆ ಎಂದು ಬಂಟ್ವಾಳ ತಾಲೂಕು ಭಾರತೀಯ ಸೇವಾದಳದ ಅಧ್ಯಕ್ಷ ರೊ. ಟಿ. ಶೇಷಪ್ಪ ಹೇಳಿದ್ದಾರೆ. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಜ್ಯ ಕುಂಬಾರರ ಮಹಾಸಂಘ ಕರಾವಳಿ ವಿಭಾಗ ಮತ್ತು ಕರಾವಳಿ ಕುಲಾಲರ/ಕುಂಬಾರರ ಯುವವೇದಿಕೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಗರದ ಬೋಂದೆಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸರ್ವಜ್ಞ ಜಯಂತಿಯನ್ನು ಕೇವಲ ಕುಂಬಾರ ಸಮಾಜ ಮಾತ್ರವಲ್ಲ ಸಾರ್ವಜನಿಕವಾಗಿ ಎಲ್ಲರೂ ಸೇರಿ ಆಚರಿಸುವುದರ ಮೂಲಕ ತ್ರಿಪದಿ ಬ್ರಹ್ಮನಿಗೆ ಗೌರವ ಸಲ್ಲಿಸಬೇಕು. ಹಿಂದೆ ಶಾಲಾ ಪಾಠಗಳಲ್ಲಿ ಸರ್ವಜ್ಞನ ಬಗ್ಗೆ ಪಾಠ ಹಾಗೂ ವಚನಗಳು ಮುದ್ರಿತವಾಗಿ ಮಕ್ಕಳಿಗೆ ತಿಳಿಯಲು ಸಾಧ್ಯವಿತ್ತು. ಇದನ್ನು ಮುಂದುವರಿಸಬೇಕು. ಹೆಚ್ಚು ಓದದೆ ನಿರ್ಗರ್ವಿಯಾಗಿ ಅನುಭವದಿಂದ ಪಡೆದ ವಿಷಯಗಳನ್ನು ವಚನಗಳ ಮೂಲಕ ಜನರಿಗೆ ತಿಳಿಸುತ್ತಾ ವೇದದ ಸಾರವನ್ನು ತ್ರಿಪದಿಗಳ ಮೂಲಕ ಜನರಿಗೆ ಅರ್ಥವಾಗುವಂತೆ ತಿಳಿಸಿದವರು ಸರ್ವಜ್ಞ. ಇದನ್ನು ಶಾಲಾ ಮಕ್ಕಳಿಗೆ ತಿಳಿಸುವ ಮೂಲಕ ನೈತಿಕ ಸಮಾಜವನ್ನು ಕಟ್ಟುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಸರ್ವಜ್ಞರ ಹೂವಿನ ಹಾರರ್ಪಣೆಯನ್ನು ಮಾಡಲಾಯಿತು. ಮಂಗಳೂರು ತಹಶೀಲ್ದಾರರಾದ ಎಂ.ಎ. ಚೌಧರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೊಂದೇಲ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಗುಣವಂತ, ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ಡಾ. ಅಣ್ಣಯ್ಯ ಕುಲಾಲ್, ಸಂಘದ ರಾಜ್ಯಾಧ್ಯಕ್ಷ ಗಂಗಾಧರ್ ಬಂಜಾನ್, ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಅನಿಲ್ ದಾಸ್, ಅಶೋಕ್ ಕೂಳೂರು ಮತ್ತಿತರರು ಉಪಸ್ಥಿತರಿದ್ದರು.

Also Read  10.06.20 News Highlights

error: Content is protected !!
Scroll to Top