ಪದವು: ಕುಮಾರಧಾರಾ ನದಿಗೆ ಸ್ನಾನಕ್ಕಿಳಿದು ಸುಸ್ತಾದ 8 ಮಂದಿ ಬಾಲಕರನ್ನು ರಕ್ಷಿಸಿದ ಸ್ಥಳೀಯರು ► ಊರವರ ಸಮಯಪ್ರಜ್ಞೆಯಿಂದಾಗಿ ತಪ್ಪಿತು ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಫೆ.13. ಸ್ನಾನಕ್ಕೆಂದು ನದಿಗೆ ಇಳಿದಿದ್ದ ಎಂಟು ಮಂದಿ ಬಾಲಕರು ಹಿಂತಿರುಗಿ ಬರಲಾಗದೆ ಒದ್ದಾಡುತ್ತಿದ್ದಾಗ ಸ್ಥಳೀಯರು ರಕ್ಷಿಸಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳವಾರದಂದು ಕುಂತೂರಿನಲ್ಲಿ ನಡೆದಿದೆ.

ಹತ್ತನೇ ತರಗತಿಯ ಎಂಟು ಮಂದಿ ಬಾಲಕರು ಸ್ನಾನ ಮಾಡುವ ಸಲುವಾಗಿ ಪದವು ಸಮೀಪದ ಉರುಂಬಿ ಎಂಬಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಗೆ‌ ಇಳಿದಿದ್ದರು. ನದಿ ನೀರಿನಲ್ಲಿ ಆಟವಾಡುತ್ತಾ ಮುಂದೆ ಸಾಗಿದ ಬಾಲಕರು ನದಿಯ ಮಧ್ಯ ಭಾಗಕ್ಕೆ ತಲುಪಿದಾಗ ಸುಸ್ತಾಗಿದ್ದು, ಈಜುವ ಪರಿಸ್ಥಿತಿಯಲ್ಲಿ ಇರಲಿಲ್ಲವೆನ್ನಲಾಗಿದೆ. ಇವರು ನದಿಗೆ ತೆರಳುತ್ತಿದ್ದಾಗ ಇವರನ್ನು ಸ್ಥಳೀಯರೊಬ್ಬರು ನೀರಿಗಿಳಿಯದಂತೆ ಎಚ್ಚರಿಸಿದ್ದು, ಅವರ ಮಾತನ್ನು ಕೇಳದೆ ಬಾಲಕರು ನದಿಗಿಳಿದಿದ್ದರು.‌ ನದಿಯಲ್ಲಿ ಈಜಲಾಗದೆ ಸುಸ್ತಾಗಿದ್ದ ಬಾಲಕರನ್ನು ಇನ್ನೊಂದು ದಡದಲ್ಲಿ ಕುಳ್ಳಿರಿಸಿದ ಸ್ಥಳೀಯರು ಕುಂತೂರಿನ ಕೆಲವರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕಾಗಮಿಸಿದ ಸಿದ್ದೀಕ್ ಎ.ಎಸ್, ಸತೀಶ್ ಪೂಜಾರಿ, ಅಯ್ಯೂಬ್ ಬಿ.ಕೆ., ಇಕ್ಬಾಲ್ ಎ.ಎಸ್, ವಿಠಲ ನಾಯ್ಕ್, ಉನೈಸ್ ಹಾಗೂ ಇಕ್ಬಾಲ್ ರವರು ಬಾಲಕರನ್ನು ರಕ್ಷಿಸಿ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಸ್ಥಳೀಯರೊಬ್ಬರ ಸಮಯ ಪ್ರಜ್ಞೆಯಿಂದಾಗಿ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Also Read  ಮಂಗಳೂರು: ದ್ವಿಚಕ್ರ ವಾಹನದಿಂದ ಬಿದ್ದು ಮಹಿಳೆ ಮೃತ್ಯು

error: Content is protected !!
Scroll to Top