ಗ್ರಾಹಕರ ಸೋಗಿನಲ್ಲಿ ಬಂದು 1.98ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚನೆ

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 20. ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದ ಮಹಿಳೆಯರು ನಕಲಿ ಚಿನ್ನಾಭರಣ ಕೊಟ್ಟು ಲಕ್ಷಾಂತರ ರೂ. ಮೌಲ್ಯದ ಅಸಲಿ ಚಿನ್ನಾಭರಣ ಪಡೆದುಕೊಂಡು ಹೋಗಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಕನಕದಾಸ ರಸ್ತೆಯಲ್ಲಿರುವ ನಿತ್ಯಾನಂದ ಎಂಬವರ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಂದಾಜು 35ರಿಂದ 45ವರ್ಷ ಪ್ರಾಯದ ಮೂವರು ಬುರ್ಖಧಾರಿ ಮಹಿಳೆಯರು, 15,800 ಗ್ರಾಂ. ತೂಕದ ಒಂದು ಚಿನ್ನದ ಚೈನ್ ಮತ್ತು 10.150 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ಖರೀದಿಸಿ, ಇದಕ್ಕೆ ಹಣದ ಬದಲಾಗಿ ಮಹಿಳೆಯರು ತಮ್ಮ ಬಳಿ ಇದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಲೇಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿದ್ದಾರೆನ್ನಲಾಗಿದೆ. ಇದರಲ್ಲಿ 19,000ರೂ. ಹಣವನ್ನು ನಗದು ರೂಪದಲ್ಲಿ ಪಡೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ವ್ಯವಹಾರದ ಸಂದರ್ಭ ಚೌಕಾಸಿ ಮಾಡಿದ ಮಹಿಳೆಯರು ನಿತ್ಯಾನಂದ ಅವರ ಗಮನವನ್ನು ಬೇರೆಡೆಗೆ ಸೆಳೆದು, ನಕಲಿ ಚಿನ್ನದ ಆಭರಣಗಳನ್ನು ನೀಡಿ 1,98,923ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಶುಭಕಾರ್ಯ ಅರ್ಧದಲ್ಲಿ ನಿಂತರೆ ಏನು ಮಾಡಬೇಕು ಇಲ್ಲಿದೆ ಸುಲಭ ಪರಿಹಾರ ಕಷ್ಟಗಳಿಗೆ ಶಾಶ್ವತ ಪರಿಹಾರ

error: Content is protected !!
Scroll to Top