(ನ್ಯೂಸ್ ಕಡಬ) newskadaba.com ವಿಟ್ಲ, ಫೆ. 19. 40 ಅಡಿ ಎತ್ತರದ ಮರವೇರಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕನನ್ನು ಜಾರಪ್ಪನಾಯ್ಕ (60) ಎಂದು ಗುರುತಿಸಲಾಗಿದೆ. ಜಾರಪ್ಪನಾಯ್ಕ ಅವರು ಎಂದಿನಂತೆ ಮನೆಯಿಂದ ರಘುರಾಮ ತಂತ್ರಿ ಎಂಬವರ ತೋಟದ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದರು. ಆದರೆ ಅಲ್ಲಿಗೆ ತಲುಪದೇ ಇದ್ದ ಕಾರಣ, ಜಾರಪ್ಪನಾಯ್ಕರ ಮನೆಯಲ್ಲಿ ವಿಚಾರಿಸಿದಾಗ ಬೆಳಿಗ್ಗೆಯೇ ಹೋಗಿದ್ದಾರೆ ಎಂದು ತಿಳಿಸಿದ್ದರು. ಇದರಿಂದ ಸುತ್ತಲೂ ಹುಡುಕಾಡಿದಾಗ ತೋಟದೊಳಗಿನ ಸುಮಾರು 40 ಅಡಿ ಎತ್ತರದ ಮರದಲ್ಲಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.