(ನ್ಯೂಸ್ ಕಡಬ) newskadaba.com ಮುಂಬೈ, ಫೆ. 16. ವಿಮಾನದಿಂದ ಇಳಿದು ಟರ್ಮಿನಲ್ ಗೆ ಬರಲು ವ್ಹೀಲ್ ಚೇರ್ ಲಭ್ಯವಾಗದ ಹಿನ್ನೆಲೆ ನಡೆದುಕೊಂಡು ಟರ್ಮಿನಲ್ ಗೆ ಬರುತ್ತಿದ್ದ 80 ವರ್ಷ ವಯಸ್ಸಿನ ವೃದ್ಧರೊಬ್ಬರು ಇಮಿಗ್ರೇಷನ್ ಕೌಂಟರ್ ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ದಂಪತಿಗಳು ನ್ಯೂಯಾರ್ಕ್ ನಿಂದ ಏರ್ ಇಂಡಿಯಾ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದು, ಮೊದಲೇ ವ್ಹೀಲ್ಚೇರ್ ಕಾಯ್ದಿರಿಸಿದ್ದರು. ಆದರೆ ವ್ಹೀಲ್ ಚೇರ್ ಕೊರತೆಯಿಂದಾಗಿ ಈ ವೃದ್ಧ ದಂಪತಿಗೆ ಒಂದು ವ್ಹೀಲ್ ಚೇರ್ ನೆರವು ಸಿಕ್ಕಿತು. ಪತ್ನಿ ವ್ಹೀಲ್ ಚೇರ್ ನಲ್ಲಿ ಕುಳಿತರೆ ಪತಿ ಆಕೆಯ ಪಕ್ಕದಲ್ಲೇ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸುಮಾರು 1.5 ಕಿಲೋಮೀಟರ್ ದೂರ ಕ್ರಮಿಸಿದ ದಂಪತಿ ಇಮಿಗ್ರೇಶನ್ ಕೌಂಟರ್ ತಲುಪುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಮುಂಬೈ ವಿಮಾನ ನಿಲ್ದಾಣದ ವೈದ್ಯಕೀಯ ಸೌಲಭ್ಯ ಕೇಂದ್ರಕ್ಕೆ ಕರೆದೊಯ್ದು ಬಳಿಕ ನಾನಾವತಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಮೂಲಗಳು ತಿಳಿಸಿವೆ.