(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 15. ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ತುಮಕೂರಿನ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರದಂದು ಬೆಳಿಗ್ಗೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ತುಮಕೂರು ಜಿಲ್ಲೆಯ ನಯನ ಎಂ.ಜಿ. ಎಂದು ಆಕೆಯ ಬ್ಯಾಗ್ ನಲ್ಲಿ ಸಿಕ್ಕಿರುವ ಆಧಾರ್ ಕಾರ್ಡ್ ನ ಮಾಹಿತಿಯಂತೆ ರೈಲ್ವೇ ಪೋಲೀಸರು ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ನೀಡಿದ್ದಾರೆ. ಕಣ್ಣೂರು-ಬೆಂಗಳೂರು-ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬಿಸಿರೋಡಿನ ನೇತ್ರಾವತಿ ನದಿಯ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆ ಕುಳಿತುಕೊಂಡಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿಗಳು ಬಿಸಿರೋಡಿನ ಕಚೇರಿಗೆ ನೀಡಿ ಮಾಹಿತಿ ತಿಳಿಸಿದ್ದಾರೆ. ಘಟನೆಗೆ ನಿಖರ ಕಾರಣ ಮತ್ತು ಅವರ ವಿಳಾಸ ಸರಿಯಾಗಿ ಇನ್ನಷ್ಟೇ ತಿಳಿದುಬರಬೇಕಿದೆ. ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹವನ್ನು ಸ್ಥಳೀಯ ಮುಳುಗುತಜ್ಞರಾದ ಮಹಮ್ಮದ್ ಅವರ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.