(ನ್ಯೂಸ್ ಕಡಬ) newskadaba.com ಕಡಬ, ಫೆ. 12. ಮಲಂಕರ ಕ್ಯಾಥೊಲಿಕ್ ಅಸೋಸಿಯೇಷನ್ ಪುತ್ತೂರು ಧರ್ಮಪ್ರಾಂತ್ಯದ ನೇತೃತ್ವದಲ್ಲಿ ನಡೆಯುತ್ತಿರುವ ವಾಸಯೋಗ್ಯವಲ್ಲದ ಮನೆಗಳ ಪುನರ್ ನಿರ್ಮಾಣ ಮತ್ತು ಹಳೇ ಮನೆಗಳ ದುರಸ್ತಿ ಕಾಮಗಾರಿ ಯೋಜನೆಯ ಎರಡನೇ ವರ್ಷದ ಕಾಮಗಾರಿಯ ಶಂಕುಸ್ಥಾಪನೆಯನ್ನು ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ವಂದನೀಯ ರೆ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರು ನೆರವೇರಿಸಿದರು.
ಮಲಂಕರ ಕ್ಯಾಥೊಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ಮಲಂಕರ ಕ್ಯಾಥೊಲಿಕ್ ಅಸೋಸಿಯೇಷನ್ (ಎಂಸಿಎ) ನೇತೃತ್ವದಲ್ಲಿ ಎಂಸಿಎ ದಕ್ಷಿಣ ಕನ್ನಡ, ಬೆಂಗಳೂರು ಮತ್ತು ಶಿವಮೊಗ್ಗ ವಲಯಗಳ ಸಹಭಾಗಿತ್ವ ಮತ್ತು ಆಯಾ ಪ್ರದೇಶಗಳ ಎಂಸಿಎ ಘಟಕಗಳ ಮೇಲುಸ್ತುವಾರಿಯಲ್ಲಿ ಬಡವರಿಗಾಗಿ ಈ ಗೃಹ ನಿರ್ಮಾಣ ಯೋಜನೆಯು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ದಕ್ಷಿಣ ಕನ್ನಡ ವಲಯದ ವಿಮಲಗಿರಿ ಚರ್ಚ್ ವ್ಯಾಪ್ತಿಯಲ್ಲಿ ಒಂದು ಹೊಸ ಮನೆಯ ನಿರ್ಮಾಣ ಕಾರ್ಯ ಮಾಡಲಾಗಿತ್ತು.ಇದರ ಮುಂದುವರಿದ ಭಾಗವೆಂಬಂತೆ ಈ ವರ್ಷವೂ ದಕ್ಷಿಣ ಕನ್ನಡ ವಲಯದ ನೂಜಿಬಾಳ್ತಿಲ ಚರ್ಚ್ ವ್ಯಾಪ್ತಿಯ ಪೇರಡ್ಕ ಎಂಬಲ್ಲಿ ಒಂದು ನೂತನ ಮನೆ ಮತ್ತು ಶಿರಾಡಿ, ಅಡ್ಡಹೊಳೆ, ಕಲ್ಲುಗುಡ್ಡೆ, ನೆಲ್ಯಾಡಿ, ಕೋಡಿಂಬಾಳ ಚರ್ಚ್ ವ್ಯಾಪ್ತಿಯಲ್ಲಿ ಸೇರಿದಂತೆ ಒಟ್ಟು ಐದು ಮನೆಗಳ ದುರಸ್ತಿ ಕಾರ್ಯಗಳು ನೆರವೇರಲಿದೆ. ಪುತ್ತೂರು ಧರ್ಮಪ್ರಾಂತ್ಯದ ಮತ್ತು ದಕ್ಷಿಣ ಕನ್ನಡ ವಲಯಗಳ ಎಂಸಿಎ ಪದಾಧಿಕಾರಿಗಳ ತಂಡವು ಆಯಾ ಘಟಕಗಳು ನೀಡಿದ ಮಾಹಿತಿಯನ್ನು ಆಧರಿಸಿ ಫಲಾನುಭವಿಗಳ ಮನೆಗಳನ್ನು ಭೇಟಿ ಮಾಡಿ ಹಲವಾರು ಮಾನದಂಡಗಳನ್ನು ಪರಿಶೀಲಿಸಿ ನಂತರದಲ್ಲಿ ಮನೆಗಳ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸುತ್ತದೆ. ಈ ವರ್ಷದ ಏಪ್ರಿಲ್ ತಿಂಗಳ ಅಂತಿಮದಲ್ಲಿ ಹೊಸ ಮನೆ ಹಾಗೂ ದುರಸ್ತಿ ಮಾಡುವ ಮನೆಗಳ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.
ದಕ್ಷಿಣ ಕನ್ನಡ ವಲಯದ ಅಧ್ಯಕ್ಷ ಸುಜಿತ್ ಪಿ.ಕೆ ಅವರು ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ಸಂಘಟನೆಗೆ ಮತ್ತು ಅಧ್ಯಕ್ಷ ಬೈಜು ಎಸ್.ಆರ್ ಅವರನ್ನು ಒಳಗೊಂಡ ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪುತ್ತೂರು ಧರ್ಮಾಧ್ಯಕ್ಷರಾದ ವಂದನೀಯ ಬಿಷಪ್ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರು ಶಂಕುಸ್ಥಾಪನೆಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಂಸಿಎಯ ಪ್ರಮುಖರಾದ ಯೋಹನ್ನಾನ್ ಒ.ಎಂ,ಪ್ರಿಯಾ, ಮಿನಿ ಕುರಿಯನ್, ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೆ.ವೈ, ದಕ್ಷಿಣ ಕನ್ನಡ ವಲಯದ ಎಂಸಿಎ ಆಧ್ಯಾತ್ಮಿಕ ಸಲಹೆಗಾರರಾದ ರೆ.ಫಾ. ಕುರಿಯನ್ ಪುಲಿಪ್ಪರ, ರೆ.ಫಾ ಬಿಜೋಯ್ ವರ್ಗೀಸ್, ಅಧ್ಯಕ್ಷ ಸುಜಿತ್ ಪಿ.ಕೆ,ಪ್ರಧಾನ ಕಾರ್ಯದರ್ಶಿ ವರ್ಗೀಸ್, ಕೋಶಾಧಿಕಾರಿ ತಂಗಚ್ಚನ್, ಉಪಾಧ್ಯಕ್ಷ ಅಜೇಶ್, ಕಾರ್ಯದರ್ಶಿ ಪ್ರಕಾಶ್, ನೂಜಿಬಾಳ್ತಿಲ ಘಟಕದ ಅಧ್ಯಕ್ಷ ಶಾಜನ್, ರೆ.ಫಾ. ಶೈಜು, ಸಿಸ್ಟರ್‌ಗಳಾದ ವೀಣಾ ಮತ್ತು ದೀನಾಬಂಧು, ಇಂಜಿನಿಯರ್ ವಿನೋದ್ ಸೇರಿದಂತೆ ನೂಜಿಬಾಳ್ತಿಲ ಘಟಕದ ಪದಾಧಿಕಾರಿಗಳು ಹಾಗೂ ಪ್ರಮುಖರು, ಫಲಾನುಭವಿಗಳು ಉಪಸ್ಥಿತರಿದ್ದರು.